ಕುಂದಾಪುರ: ಚರಂಡಿ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಸಹಿತ ಹತ್ತಾರು ಬೇಡಿಕೆಗಳನ್ನು ಈಡೇರಿಸದ ಹೊರತು ಮುಂಬರುವ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಜಪ್ತಿ ಗ್ರಾಮದ ಇಂಬಾಳಿ ಭಾಗದ ಗ್ರಾಮಸ್ಥರು ಬ್ಯಾನರ್ ಅಳವಡಿಸಿ ಎಚ್ಚರಿಸಿದ್ದಾರೆ.
ಜಪ್ತಿ ಗ್ರಾಮದ ಎರಡನೇ ವಾರ್ಡಿನ ಇಂಬಾಳಿ ನಾಗಬನ ಸಂಪರ್ಕಿಸುವ ರಸ್ತೆ ಈವರೆಗೆ ಅಭಿವೃದ್ಧಿ ಭಾಗ್ಯ ದೊರೆತಿಲ್ಲ. ಕಳೆದ 16 ವರ್ಷಗಳಿಂದ ಸಾಧಾರಣ ಕಚ್ಛಾ ರಸ್ತೆಯಾಗಿಯೇ ಉಳಿದಿದೆ.
ಮಳೆಗಾಲದಲ್ಲಂತೂ ಈ ರಸ್ತೆಯ ಅವ್ಯವಸ್ಥೆಯಿಂದ ಶಾಲಾ ಮಕ್ಕಳು, ಜನಸಾಮಾನ್ಯರು ಬಹಳಷ್ಟು ಸಂಕಷ್ಟ ಅನುಭವಿಸುತ್ತಿದ್ದು, ಕುಡಿಯುವ ನೀರಿನ ಬೇಡಿಕೆ ಈಡೇರಿಲ್ಲ. ಒಳಚರಂಡಿ ಸಮಸ್ಯೆಯೂ ಬಗೆಹರಿದಿಲ್ಲ. ಗ್ರಾಮದ ಅಭಿವೃದ್ಧಿಯನ್ನು ಕಡೆಗಣಿಸಿ ದ್ದರಿಂದ ಭಾಗದ ಎಲ್ಲ ಸಾರ್ವಜನಿಕರು ಸಾಮೂಹಿಕವಾಗಿ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.
ಅನೇಕ ಸಮಯಗಳಿಂದ ಇಲ್ಲಿನ ಬೇಡಿಕೆ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧೀಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದರು ಸ್ಪಂದನೆ ದೊರೆತಿಲ್ಲ.