ಕಾರ್ಕಳ : ಕೃಷಿಯಲ್ಲಿ ನಾನಾ ಆವಿಷ್ಕಾರಗಳಲ್ಲು ಮಾಡಿರುವ ಕೃಷಿ ವಿಜ್ಞಾನಿ ಮೂಡುಬಿದಿರೆ ಬೆಳುವಾಯಿಯ ಡಾ. ಎಲ್. ಸಿ. ಸೋನ್ಸ್ ಅವರು ನಿಧನರಾಗಿದ್ದಾರೆ.
ಭಾರತದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ಪದವಿಗಳನ್ನು ಪಡೆದು ಅಮೆರಿಕದ ವಿಶ್ವವಿದ್ಯಾನಿಲಯದಿಂದ ಸಸ್ಯಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದ ಸೋನ್ಸ್ ಅವರು ಕರ್ನಾಟಕದ ಕೃಷಿ ಚರಿತ್ರೆಯಲ್ಲಿ ದಾಖಲಾರ್ಹ ಹೆಸರು. ಡಾ. ಲಿವಿಂಗ್‌ಸ್ಟನ್ ಚಂದ್ರಮೋಹನ ಸೋನ್ಸ್ ಕರ್ನಾಟಕದ ಕೃಷಿಕರ ಪಾಲಿಗೆ ಚರಿತ್ರಾರ್ಹ ಮಾದರಿಯೇ ಆಗಿದ್ದರು.
ಸೋನ್ಸ್ ಪ್ರಪಂಚದ ಕೃಷಿಯನ್ನು ನೋಡಿದವರು. ಅದೇ ಉದ್ದೇಶದಿಂದ ದೇಶ ಸುತ್ತಿದವರು. ಕೋಶ ಓದಿದವರು, ಬೀಜ, ಹವಾಮಾನ, ಪೋಷಣೆ, ಮಾರುಕಟ್ಟೆ ಇತ್ಯಾದಿಗಳನ್ನು ಅಧ್ಯಯನ ಮಾಡಿದವರು, ನಾಲೈದು ದಶಕಗಳ ಹಿಂದೆಯೇ ತಮಗೆ ಬೇಕಾದ ಗಿಡಗಳನ್ನು ವಿದೇಶಗಳಿಂದ ವಿಮಾನದಲ್ಲಿ ತರಿಸಿದವರು. ಅಂಥ ಗಿಡಮೂಲಗಳಿಂದಲೇ ಕಸಿ ಕಟ್ಟುವಿಕೆ, ನರ್ಸರಿ ಮೂಲಕ ಗಿಡ ವೃದ್ಧಿಸಿ ಹಂಚಿದವರು.
ರಂಬುಟಾನ್, ಮ್ಯಾಂಗೋಸ್ಟಿನ್, ಅನಾನಸು, ತೆಂಗು, ಬಿದಿರು ಕೃಷಿಗೆ ಸೋನ್ಸ್ ಈಗಲೂ ಐಕಾನ್. ಇಂತಹ ಸೋನ್ಸರ ಬಗ್ಗೆ ‘ಸೋನ್ಸ್ ಬಿತ್ತಿದ ಫಲ ಪ್ರಪಂಚ -ಸೋನ್ಸ್ ಫಾರ್ಮ್’ ಎಂಬ ಪುಸ್ತಕ ಬರೆದಿದ್ದರು. ಅದರ ಏ.16ರಂದು ಬಿಡುಗಡೆಯಾಗಬೇಕಿತ್ತು. ಮೂಡುಬಿದಿರೆಯ ಅವರ ಅಭಿಮಾನಿಗಳು ಈ ಕಾರ್ಯಕ್ರಮವನ್ನು ‘ಕನ್ನಡಭವನ’ದಲ್ಲಿ ಆಯೋಜಿಸಿದ್ದರು. ಸ್ವತಃ ಮೋಹನ ಆಳ್ವವರೇ ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಿದ್ದರು. ಆದರೆ ಅದಕ್ಕೂ ಮೊದಲೇ ಸೋನ್ಸ್ ಇನ್ನಿಲ್ಲವಾದರು.