ಕುಂದಾಪುರ: ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅವರಿಗೆ ಬೈಂದೂರು ವಿಧಾನಸಭೆ ಕ್ಷೇತ್ರದ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬೈಂದೂರು ಮಂಡಲದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಶಿವಮೊಗ್ಗದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಬುಧವಾರ ಭೇಟಿ ಮಾಡಿ ಬೈಂದೂರು ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ.
ಯಾವುದೇ ರೀತಿಯ ಕಪ್ಪು ಚುಕ್ಕಿ ಇಲ್ಲದೆ ಕ್ಷೇತ್ರದ ಜನರೊಂದಿಗೆ ಓಡನಾಟವನ್ನು ಹೊಂದಿರುವ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅವರನ್ನು ಕಡೆಗಣಿಸಲು ಕಾರಣ ಏನೆಂದು ಸಂಸದರನ್ನು ಪದಾಧಿಕಾರಿಗಳು ಪ್ರಶ್ನೆಯನ್ನು ಮಾಡಿದ್ದಾರೆ ಎನ್ನಲಾಗಿದೆ.
ಹಿಂದುಳಿದ ಬೈಂದೂರು ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲು ಸಾಕಷ್ಟು ಶ್ರಮವನ್ನು ವಹಿಸಿದ್ದ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅವರಿಗೆ ಬೈಂದೂರು ಕ್ಷೇತ್ರದ ಟಿಕೆಟ್ ನೀಡಬೇಕೆಂದು ಸಂಸದರನ್ನು ಕಾರ್ಯಕರ್ತರು ಒತ್ತಾಯಿಸಿದರು.ಬೈಂದೂರು ಕ್ಷೇತ್ರದ ಪದಾಧಿಕಾರಿಗಳ ಅಭಿಪ್ರಾಯಕ್ಕೆ ಸ್ಪಂದನೆ ಮಾಡಿದ ಸಂಸದರು ರಾಷ್ಟ್ರೀಯ ನಾಯಕರ ಗಮನಕ್ಕೆ ತರಲಾಗುವುದು ಎಂದು ಪ್ರತಿಕ್ರಿಯಿಸಿದ್ದಾರೆ ಎನ್ನಲಾಗುತ್ತಿದೆ.
ಬೈಂದೂರು ವಿಧಾನಸಭೆ ಕ್ಷೇತ್ರದಲ್ಲಿ ಸಾಲು ಸಾಲು ಸಮಾವೇಶಗಳನ್ನು ಸಂಘಟಿಸಿ ಪಕ್ಷವನ್ನು ಬಲಪಡಿಸಲು ಶಾಸಕರು ಬಹಳಷ್ಟು ಶ್ರಮವನ್ನು ವಹಿಸಿದ್ದಾರೆ ಮಾತ್ರವಲ್ಲದೆ ಸರಕಾರದ ಜನಪಯೋಗಿ ಕೆಲಸಗಳನ್ನು ಕೈಪಿಡಿಯ ಮೂಲಕ ಮನೆ ಮನೆಗೆ ತಲುಪಿಸಲು ವಿಶೇಷವಾದ ಪ್ರಯತ್ನವನ್ನು ಮಾಡಿದ್ದಾರೆ ಎಂದು ಶಾಸಕರ ಕಾರ್ಯಗಳ ಬಗ್ಗೆ ಅವರ ಅಭಿಮಾನಿಗಳು ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಬಿ.ಎಂ ಸುಕುಮಾರ ಶೆಟ್ಟಿ ಅವರಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ಅವರ ಅಭಿಮಾನಿಗಳು ಪಕ್ಷದ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ.ಬೈಂದೂರು ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಸೇರಿದಂತೆ ಮಂಡಲದ 100ಕ್ಕೂ ಅಧಿಕ ವಿವಿಧ ಮೋರ್ಚಾದ ಪದಾಧಿಕಾರಿಗಳು, 300 ಕ್ಕೂ ಅಧಿಕ ಕಾರ್ಯಕರ್ತರು ಸಂಸದರನ್ನು ಶಿವಮೊಗ್ಗದಲ್ಲಿ ಭೇಟಿ ಮಾಡಿ ಬಿ.ಎಂ ಸುಕುಮಾರ್ ಶೆಟ್ಟಿ ಅವರಿಗೆ ಟಿಕೆಟ್ ನೀಡುವಂತೆ ಒತ್ತಡವನ್ನು ಹೇರಿದ್ದರು.