ಉಡುಪಿ: ಉಡುಪಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಯಶಪಾಲ್ ಸುವರ್ಣ ಅವರು ಚುನಾವಣಾಧಿಕಾರಿಗೆ ಸಲ್ಲಿಸಿರುವ ನಾಮಪತ್ರ ಕ್ರಮಬದ್ಧವಾಗಿಲ್ಲ. ಅಫಿದಾವಿತ್ ನಲ್ಲಿ ತಪ್ಪು ಮಾಹಿತಿ ನೀಡಿ, ಚುನಾವಣಾ ಆಯೋಗಕ್ಕೆ ಮೋಸ ಎಸಗಿದ್ದಾರೆ ಎಂದು ಉಡುಪಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದಕ್ಷತ್ ಆರ್. ಶೆಟ್ಟಿ ಆರೋಪಿಸಿದ್ದಾರೆ.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.20ರಂದು ಬ್ಯಾಂಕಿನಿಂದ ಸ್ಟ್ಯಾಂಪ್ ಪೇಪರ್ ತೆಗೆದುಕೊಂಡಿದ್ದಾರೆ. ಆದರೆ, ನೋಟರಿ ಮಾಡಿಸಿದ ದಿನಾಂಕ ಏ.19 ಎಂದು ನಮೂದಾಗಿದೆ. ಹಾಗಾದ್ರೆ ಏ.20ರಂದು ಪಡೆದುಕೊಂಡ ಸ್ಟ್ಯಾಂಪ್ ಪೇಪರ್ ಗೆ ಏ.19ರಂದು ನೋಟರಿ ಮಾಡಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು.
ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಸೂಕ್ತ ಉತ್ತರ ದೊರಕದಿದ್ದಲ್ಲಿ ಕೋರ್ಟ್ ಮೊರೆ ಹೋಗಲು ನಾವು ಸಿದ್ದರಿದ್ದೇವೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಬಾಲಕೃಷ್ಣ ಆಚಾರ್, ರೋಹಿತ್ ಕರಂಬಳ್ಳಿ ಇದ್ದರು.