News Karnataka Kannada
Thursday, April 25 2024
ಕರಾವಳಿ

ಭ್ರಷ್ಟರ ಸಂಪತ್ತಿನ ಕಣಜ ಎತ್ತಿನಹೊಳೆ ಯೋಜನೆ: ದಶಕ ಕಳೆದರೂ ಹನಿ ನೀರಿಲ್ಲ

Kanaj Ettinhola Project of corrupt people's wealth: Even after a decade, there is no drop of water
Photo Credit : News Kannada

ಮಂಗಳೂರು:  (ಮೇ10) ರಾಜ್ಯದ ಎಲ್ಲ ಕಡೆ ಮತದಾನದ ಗೌಜಿ. ನಮ್ಮ ಎನ್‌ಸಿಇಫ್‌ ತಂಡವು ಮತದಾನದ ಕಡೆ ಗಮನ ಕೊಡದೇ ಮತ ಬಹಿಷ್ಕಾರ ಹಾಕಿ, ಹೊರಟದ್ದು ದಕ್ಷಿಣ ಕನ್ನಡ ಜಿಲ್ಲೆಯ ಮಡಿಲಿಗೆ ಮತ್ತು ಪಶ್ಚಿಮ ಘಟ್ಟದ ಒಡಲಿಗೆ ಏಟು ನೀಡುತ್ತಿರುವ ಬ್ರಹತ್ ಭ್ರಷ್ಟಾಚಾರದ ಸಕಲೇಶಪುರದ ಎತ್ತಿನ ಹೊಳೆ ಯೋಜನಾ ವ್ಯಾಪ್ತಿ ಪ್ರದೇಶದ ಕಡೆಗೆ.

ಹೊಂಗದಹಳ್ಳದ ಹಿರಿದನ ಹಳ್ಳಿಯಿಂದ ಕಡಗರಹಳ್ಳಿ, ಆಲುವಳ್ಳಿ, ಮಾರನಹಳ್ಳಿ, ಹೆಗ್ಗದ್ದೆ, ಹೆಬ್ಬಸಾಲೆಯ ಹೊಂಗದ ಹೊಳೆ, ಕೇರಿಹೋಳೆ, ಎತ್ತಿನ ಹೊಳೆ, ಕಾಡ್ಮನೆ ಹೊಳೆಯ ಕಾಮಗಾರಿ ಪ್ರದೇಶಗಳಲ್ಲಿ ಕಂಡದ್ದು ಬರೀ ಕಲ್ಲು, ಮಣ್ಣು, ಕೆಸರು, ಗುಡ್ಡಗಳನ್ನು ಕೊರೆದು ಜರಿಸಿ, ಮಳೆ ನೀರು ಇಂಗಿತವಾಗಿ ಎತ್ತಿನಹೊಳೆಯನ್ನು ತುಂಬಿಸುವ ಅಡವಿ ಪ್ರದೇಶವನ್ನು ಕತ್ತರಿಸಿ ಛಿದ್ರಗೊಳಿಸಿದ ರಣ ರಂಗದ ಕುರುಹು ಅಷ್ಟೇ. ಅಲ್ಲಿ ಹೊಳೆಗಳು ಇತ್ತು ಎಂಬುದಕ್ಕೆ ಸಾಕ್ಷಿ, ಕುರುಹುಗಳು ಇಲ್ಲದೇ ಕೇವಲ ಬಟಾ ಬಯಲು ಆಗಿರುವ ಧನ ಪ್ರಾಪ್ತಿ ಕಾಮಗಾರಿ ಪ್ರದೇಶ ಬಿಟ್ಟರೆ ನೀರಿನ ಒಂದಿಷ್ಟೂ ಹರಿವು ಕಾಣದೇ ಮರುಭೂಮಿ ಯಂತಾಗಿದೆ.

ಇದಕ್ಕಿಂತಲೂ ಆಶ್ಚರ್ಯ ಮತ್ತು ಆತಂಕ ಪಡಿಸಿದ ಸನ್ನಿವೇಶವೇನೆಂದರೆ 2013 ರಲ್ಲಿ ಎತ್ತಿನ ಹೊಳೆ ಯೋಜನೆಗೆ ನಿರ್ಮಿಸಿದ 14  ಅಡಿ ಗಾತ್ರದ ಪೈಪುಗಳು ಮಣ್ಣು, ತುಕ್ಕು ಹಿಡಿದು ಹಲವಾರು ಕಡೆ ಮುರಿದು ಹಾಳಾಗಿವೆ. ಅಲ್ಲಲ್ಲಿ ಬಿದ್ದಿದ್ದು ಲಾರಿಗಳಲ್ಲಿ ಒಡೆದ ಪೈಪುಗಳನ್ನು ಸಾಗಿಸುತ್ತಿದ್ದಾರೆ. ಹಳೆಯ ಪೈಪುಗಳನ್ನು ಒಂದೆಡೆ ಅಡಗಿಸಿ ಇಟ್ಟು ಇತ್ತೀಚಿಗೆ ನಿರ್ಮಿಸಿದ ಸಿಮೆಂಟು ಪೈಪುಗಳನ್ನು ನಿರ್ಮಾಣ ಮಾಡಿ ಕೆಲವೆಡೆ ಮಣ್ಣಿನೊಳಗೆ ಜೋಡಿಸಿದ್ದಾರೆ, ಕೆಲವೆಡೆ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಹಾಗಾದರೆ ಹಿಂದೊಮ್ಮೆ ತುರಾತುರಿಯಲ್ಲಿ 12 ರಿಂದ 14 ಅಡಿ ಎತ್ತರದ ಪೈಪುಗಳನ್ನು ಮಾಡಿ ಮಣ್ಣಿನ ಒಳಗೆ ತೂರಿ, ಅದು ನೀರು ಹರಿಯುವ ಮೊದಲೇ ಮಣ್ಣಿನ ಭಾರಕ್ಕೆ ಒಡೆದಿದೆ, ಮತ್ತು ಈಗ ಅದಕ್ಕಿಂತಲೂ ದಪ್ಪದ, ಕೇವಲ 8 ಅಡಿ ಎತ್ತರದ ಪೈಪುಗಳನ್ನು ಹೊಸದಾಗಿ ನಿರ್ಮಾಣ ಮಾಡುತ್ತಿದ್ದಾರೆ ಎಂದರೆ….ಇಲ್ಲಿ 24 ಟಿಎಂಸಿ ನೀರು ತಿರುವು ಮಾಡಲು ಸಿಗುವುದಿಲ್ಲ ಎಂದು ಒಪ್ಪಿಕೊಂಡಾಯಿತೇ? ಅಥವಾ ಇಷ್ಟೊಂದು ಬ್ರಹತ್ ಯೋಜನೆಯ ಕಾಮಗಾರಿ ಮಾಡುವವರಿಗೆ ಈ ಹಿಂದೆ ನಿರ್ಮಾಣ ಮಾಡಿರುವ ಪೈಪುಗಳು ನೀರಿನ ಒತ್ತಡಕ್ಕೆ ಸಾಕಷ್ಟು ಬಲಯುತವಾಗಿಲ್ಲ ಎಂದು ಅರಿವು ಇರಲಿಲ್ಲವೇ? ಹಾಗಾದರೆ ಹಿಂದೆ ನಿರ್ಮಾಣ ಮಾಡಿರುವ 12 ರಿಂದ 14 ಅಡಿ ಎತ್ತರದ ಪೈಪುಗಳ ಒಟ್ಟು ಹಣ ವ್ಯರ್ಥವಾದಂತೆ!?. ಈಗ ತಯಾರಿಸುವ ಹೊಸ ಪೈಪುಗಳ ಹಣ., ಯೋಜನೆಯ ವೆಚ್ಚದ ವೇಗವನ್ನು ಹೆಚ್ಚಿಸಿದಂತ ಹೊಣೆ ಯಾರಿಗೆ ಸಲ್ಲುತ್ತದೆ?

ಕಳೆದ 5 ವರುಷಗಳಲ್ಲಿ ಎತ್ತಿನ ಹೊಳೆ ಯೋಜನಾ ವ್ಯಾಪ್ತಿ ಪ್ರದೇಶಗಳಲ್ಲಿ ಭೂಕುಸಿತ, ಭೂಕಂಪ ಆಗುತ್ತಲೇ ಇದ್ದು ಹಲವಾರು ಕಡೆಗಳಲ್ಲಿ ಹಳೆಯ ಪೈಪುಗಳು ಮಣ್ಣಿನ ಒಳಗೆ ಛಿದ್ರ ಆಗಿರುವುದಕ್ಕೆ ಅಲ್ಲಲ್ಲಿ ಸಾಕ್ಷಿಗಳು ಇವೆ. ಬ್ರಹತ್ ಪೈಪುಗಳನ್ನು ಒಂದರಿಂದ ಒಂದಕ್ಕೆ ಜೋಡಿಸುವಲ್ಲಿ ಯಾವ ರಕ್ಷಣಾ ಕವಚವನ್ನೂ ಹಾಕದೇ ಭದ್ರತೆಯನ್ನೂ ನೀಡದೇ ಕೇವಲ ಕಾಟಾಚಾರಕ್ಕೆ ಪೈಪು ಜೋಡಿಸಿದಂತೆ ಕಾಣುತ್ತವೆ. ಬೆಟ್ಟದ ಕಣಿವೆಗಳಲ್ಲಿ ( ಈ ಯೋಜನೆಗೆ ಯಾವ ಮಳೆ ನೀರು ಶೇಖರಣೆ ಆಗಬೇಕೋ ಅಲ್ಲಿ ) ಬ್ರಹತ್ ಪೈಪುಗಳನ್ನು ಇದೇ ರೀತಿ ಅಸಮರ್ಪಕವಾಗಿ ಜೋಡಿಸಿದಲ್ಲಿ ಮುಂದೆ ಏನಾದರೂ ನೀರಿನ ಒತ್ತಡಕ್ಕೆ ಅಥವಾ ಕಂಪನದಿಂದ ನೀರಿನ ಪೈಪು ಒಡೆದರೆ ಯೋಜನಾ ವ್ಯಾಪ್ತಿ ಪ್ರದೇಶದ ಹಳ್ಳಿಗಳ ಪರಿಸ್ಥಿತಿ ಏನಾಗಬಹುದು?
ಇಂತಹ ಸಾವಿರಾರು ಉತ್ತರ ಇಲ್ಲದ ಪ್ರಶ್ನೆಗಳು ಎತ್ತಿನಹೊಳೆ ಯೋಜನೆಯ ಕಾಮಗಾರಿ ಪ್ರದೇಶಗಳಲ್ಲಿ ಹುಟ್ಟುತ್ತಲೇ ಇವೆ. ಕೇವಲ ಹಣ ಗಳಿಸುವ ರಾಜ್ಯದ ಜೆಸಿಬಿ ಪಕ್ಷಗಳಿಗೆ ‘ ನೀರಾವರಿ – ಅಭಿರ್ವದ್ದಿ ‘ ಎಂಬ ನೆಪದಲ್ಲಿ ಒಂದು ನದಿಯನ್ನು ಈ ರೀತಿ ಚಿತ್ರ ಹಿಂಸೆ ನೀಡಿ ನಾಶ ಮಾಡುವ ಮತ್ತು ಪಶ್ಚಿಮ ಘಟ್ಟದ ಸೂಕ್ಷ್ಮ ಜೀವ ಜಗತ್ತನ್ನು ನಿರ್ನಾಮ ಮಾಡುವ ಅವಶ್ಯಕತೆ ಏನಿತ್ತು?

ಕರಾವಳಿಯಲ್ಲಿ ಇಂದು ನೀರಿನ ಸಮಸ್ಯೆ, ತಾಪಮಾನ ಹೆಚ್ಚಳ, ಪ್ರಾಕೃತಿಕ ದುರಂತಗಳ ಉದಾಹರಣೆಯೇ ಕಣ್ಣ ಮುಂದೆ ಇರುವಾಗ ಬಿಸಿಯಾದ ಕಾವಲಿಗೆ ಎಣ್ಣೆ ಹೊಯಿದಂತೆ ಇನ್ನು, ಇನ್ನೂ ಇಂತಹ ಪ್ರಕೃತಿ ವಿರೋಧಿ ಯೋಜನೆಗಳನ್ನು ಸಮರ್ಥಿಸಿಕೊಳ್ಳುವುದೆಂದರೆ ಇದಕ್ಕಿಂತ ದೊಡ್ಡ ವಿನಾಶ ಕಾಲೇ ದುರಂತ ಬೇರೆ ಇಲ್ಲ.

ಇಷ್ಟಿದ್ದೂ ಮೊನ್ನೆ ಈ ಯೋಜನೆಯ ರೂವಾರಿಗಳಾದ ಮಾಜಿ ಮುಖ್ಯ ಮಂತ್ರಿಗಳಿಬ್ಬರು ಎಲ್ಲೋ ಅಡಗಿ ಪತ್ರಿಕಾ ಗೋಷ್ಟಿಯಲ್ಲಿ ಎತ್ತಿನ ಹೊಳೆ ಯೋಜನೆಯ ವಿಫಲ ಎಂಬುದನ್ನೂ ಒಪ್ಪಿಕೊಳ್ಳದೇ, ಎತ್ತಿನ ಹೊಳೆ ಯೋಜನೆಗೂ ನೇತ್ರಾವತಿ ಬತ್ತಿ ಹೋಗಿರುವುದಕ್ಕೂ ಸಂಬಂಧವೇ ಇಲ್ಲವೆಂದು ಸುಳ್ಳಿನ ತೋರಣ ಕಟ್ಟಿ ಸತ್ಯವನ್ನು ಮುಚ್ಚಿಡುತ್ತಿದ್ದಾರೆ. ನದಿಯಲ್ಲಿ ( ಧನ ) ನಿಧಿಯನ್ನು ಹುಡುಕುವ ಹುಟ್ಟಿದ ಊರಿಗೆ ಮಾರಿಯಾಗಿ, ಜೀವನದಿಯನ್ನು ಮಾರಿಯಾದರೂ ಸದಾ ಹಣ ಗಳಿಸಿಕೊಳ್ಳಬೇಕೆಂಬ ಇಂತಹ ವೀರರಿಗೆ ಯಾವ ಪಟ್ಟವನ್ನು ನೀಡಲಿ? ಎಂದು ತಾಯಿ ನೇತ್ರಾವತಿಯೇ ತೀರ್ಮಾನಿಸಿಯಾಗಿದೆ.

ಈಗ ಎತ್ತಿನ ಹೊಳೆ ಯೋಜನೆಯ ಕಾಮಗಾರಿ ಪ್ರದೇಶಕ್ಕೆ ( ಹಿರಿದನ ಹಳ್ಳಿಯಿಂದ ಹರವನ ಹಳ್ಳಿಯವರೆಗೆ ) ಹೋಗಿ ನೋಡಿದರೆ ಈ ಯೋಜನೆಯ ಹಿಂದಿನ ಅವೈಜ್ಞಾನಿಕ, ಅಸಮರ್ಪಕ ವಸ್ತು,ವಿಚಾರಗಳು ಒಂದೊಂದಾಗಿ ಹೊಳೆಯುತ್ತಿರುತ್ತವೆ.
ಜೈ ನೇತ್ರಾವತಿ.

ದಿನೇಶ್‌ ಹೊಳ್ಳ ಪರಿಸರವಾದಿ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು