ಅಂಕೋಲಾ: ಚಿರತೆಯೊಂದು ರಾತ್ರಿ ಮನೆಗೆ ನುಗ್ಗಿ ಮಗುವನ್ನು ಹೊತ್ತೊಯ್ಯುಲು ಪ್ರಯತ್ನಿಸಿರುವ ಘಟನೆ ಹೀರೆಗುತ್ತಿ ವಲಯ ಅರಣ್ಯ ವ್ಯಾಪ್ತಿಯ ಬರ್ಗಿಯಲ್ಲಿ ಸಂಭವಿಸಿದ್ದು ಮನೆಯ ಜನರ ಪ್ರತಿರೋಧದಿಂದ ಚಿರತೆ ಮಗುವನ್ನು ಬಿಟ್ಟು ಓಡಿ ಹೋಗಿರುವುದಾಗಿ ತಿಳಿದು ಬಂದಿದೆ.
ಬರ್ಗಿ ಗ್ರಾಮದ ಅರಣ್ಯ ಪ್ರದೇಶಕ್ಕೆ ಸಮೀಪದ ನಾರಾಯಣ ನಾಯ್ಕ ಎನ್ನುವವರ ಮನೆಯ ಒಳಗೆ ರಾತ್ರಿ ಸಮಯದಲ್ಲಿ ನುಗ್ಗಿದ ಚಿರತೆ ಚಿಕ್ಕ ಮಗುವಿನ ಮೇಲೆ ದಾಳಿ ನಡೆಸುವ ಪ್ರಯತ್ನ ಮಾಡಿದ್ದು ಮನೆಯ ಜನರು ಕೂಡಿಕೊಂಡ ಪರಿಣಾಮವಾಗಿ ಓಡಿ ಹೋಗಿ ಅರಣ್ಯ ಸೇರಿಕೊಂಡಿರುವ ಕುರಿತು ಮಾಹಿತಿ ದೊರಕಿದ್ದು ಈ ಘಟನೆಯಿಂದಾಗಿ ಗ್ರಾಮಸ್ಥರು ಭಯಭೀತರಾಗಿದ್ದಾರೆ
ಕಳೆದ ಕೆಲವು ದಿನಗಳಿಂದ ಬರ್ಗಿ ಸುತ್ತ ಮುತ್ತ ರಾತ್ರಿ ಸಮಯದಲ್ಲಿ ಚಿರತೆಗಳು ಕಾಣಿಸಿಕೊಳ್ಳುತಿರುವ ಕುರಿತು ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದು ಮನೆಗಳಿಗೆ ನುಗ್ಗಿ ಮನುಷ್ಯರ ಮೇಲೆ ದಾಳಿ ನಡೆಸುವ ಹಂತಕ್ಕೆ ತಲುಪಿರುವುದು ಆತಂಕಕಾರಿ ಸಂಗತಿಯಾಗಿದೆ.
ಇತ್ತೀಚೆಗೆ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಬರಿದಾಗಿ ಆಹಾರದ ಕೊರತೆಯಿಂದ ಚಿರತೆಗಳು ಜನವಸತಿ ಪ್ರದೇಶಗಳಿಗೆ ನುಗ್ಗಿ ದನಕರುಗಳನ್ನು, ನಾಯಿಗಳನ್ನು ಹೊತ್ತೊಯ್ಯುತ್ತಿರುವ ಘಟನೆಗಳು ಹಲವಡೆ ಮೇಲಿಂದ ಮೇಲೆ ಸಂಭವಿಸುತ್ತಿದ್ದು ಮಗುವಿನ ಮೇಲೆ ದಾಳಿ ಮಾಡಲು ಹೊರಟಿರುವುದು ಸಹಜವಾಗಿಯೇ ಜನರಲ್ಲಿ ಭೀತಿಗೆ ಕಾರಣವಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.