ಪಿರಿಯಾಪಟ್ಟಣ: ತಾಲ್ಲೂಕಿನ ಬೆಟ್ಟದಪುರದಲ್ಲಿ ದೀಪಾವಳಿ ಹಬ್ಬದ ಬಲಿಪಾಡ್ಯಮಿ ದಿನದಂದು ಸಾವಿರಾರು ಭಕ್ತಾಧಿಗಳ ಸಮ್ಮುಖ ನಡೆಯುತ್ತಿದ್ದ ದೀವಟಿಗೆ ಉತ್ಸವವನ್ನು ಈ ಬಾರಿ ಕೊರೊನಾ ಸೋಂಕಿನ ಮುಂಜಾಗ್ರತೆ ಹಿನ್ನಲೆ ರದ್ದುಪಡಿಸಿ ದೇವಾಲಯ ಆವರಣದಲ್ಲಿ ಮಾತ್ರ ಸರಳ ಆಚರಣೆ ಮಾಡುವಂತೆ ಜಿಲ್ಲಾಡಳಿತ ತಾಲೂಕು ಆಡಳಿತಕ್ಕೆ ಸೂಚಿಸಿದೆ.
ಪ್ರತಿ ವರ್ಷ ದೀಪಾವಳಿ ಹಬ್ಬದ ಬಲಿಪಾಡ್ಯಮಿ ದಿನ ಬೆಟ್ಟದಪುರದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿಯ ಬೆಟ್ಟದ ಮೇಲಿರುವ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಉತ್ಸವ ಮೂರ್ತಿಯನ್ನು ಬೆಳ್ಳಿಬಸಪ್ಪ ಉತ್ಸವ ಮೂರ್ತಿಗಳ ಜತೆಯಲ್ಲಿ ಭಕ್ತಾಧಿಗಳು ತಮ್ಮ ಮನೆಯಲ್ಲಿಯೇ ಸಿದ್ಧಪಡಿಸಿ ತಂದ ಪಂಚಿನ(ದೀವಟಿಗೆ)ನೊಂದಿಗೆ ಬೆಟ್ಟದಪುರ ವ್ಯಾಪ್ತಿಯ ಬೆಟ್ಟದತುಂಗ, ಹರದೂರು, ಡಿ.ಜಿ ಕೊಪ್ಪಲು, ಬಾರಸೆ, ಕುಡುಕೂರು, ಕೂರಗಲ್ಲು ಗ್ರಾಮಗಳಲ್ಲಿ ಮೆರವಣಿಗೆ ಮಾಡಿ ಬಳಿಕ ಗ್ರಾಮದ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಬಳಿ ಸೇರುತ್ತಿದ್ದರು, ಅಲ್ಲದೇ ಈ ವೇಳೆ ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರತಿ ಮನೆ ಬಳಿ ಹಸಿರು ಚಪ್ಪರ ಹಾಕುತ್ತಿದ್ದರು, ಆದರೆ ಈ ಬಾರಿ ಕೋವಿಡ್ ಸೋಂಕಿನ ಹಿನ್ನಲೆ ಸರಳ ಆಚರಣೆ ಮಾಡುವಂತೆ ಸೂಚಿಸಲಾಗಿದೆ.
ದೀವಟಿಗೆ ಉತ್ಸವ ಆಚರಣೆ ಸಂಬಂಧ ನಿರ್ದೇಶನ ನೀಡುವಂತೆ ಪಿರಿಯಾಪಟ್ಟಣ ತಹಸೀಲ್ದಾರ್ ಕಚೇರಿಯಿಂದ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿತ್ತು, ಈ ಪತ್ರಕ್ಕೆ ಜಿಲ್ಲಾಧಿಕಾರಿಗಳು ಸರ್ಕಾರ ಆದೇಶದಲ್ಲಿ ಕೊವೀಡ್ ಮುಂಜಾಗ್ರತೆ ಕ್ರಮವಾಗಿ ದೇವಾಲಯದಲ್ಲಿ ಜಾತ್ರೆ, ಹಬ್ಬ, ಉತ್ಸವ, ಮೆರವಣಿಗೆ ಹಾಗೂ ಸಾಮೂಹಿಕ ಗುಂಪುಗೂಡುವಿಕೆ ನಿಷೇಧಿಸಿರುವುದರಿಂದ ಉತ್ಸವವನ್ನು ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಆವರಣದೊಳಗೆ ಆರ್ಚಕರು ಹಾಗೂ ಸ್ಥಳೀಯರೊಂದಿಗೆ ಸರಳ ಹಾಗೂ ಸಾಂಪ್ರಾದಾಯಿಕವಾಗಿ ಆಚರಣೆ ಮಾಡುವಂತೆ ನಿರ್ದೇಶನ ನೀಡಿದ್ದಾರೆ. ಪ್ರತಿ ವರ್ಷ ಅತ್ಯಂತ ವೈಭವದಿಂದ ಜರುಗುತ್ತಿದ್ದ ದೀವಟಿಗೆ ಉತ್ಸವವನ್ನು ಸರ್ಕಾರ ಕರೊನಾ ಹೆಸರಿನಲ್ಲಿ ರದ್ದುಪಡಿಸಿ ಸರಳವಾಗಿ ಆಚರಿಸುವಂತೆ ಸೂಚಿಸಿರುವುದಕ್ಕೆ ಬೆಟ್ಟದಪುರ ವ್ಯಾಪ್ತಿಯ ಭಕ್ತಾಧಿಗಳು ಸೇರಿದಂತೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.