ಕೆ.ಆರ್.ಪೇಟೆ: ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಪೊಲೀಸರು ಸುಮಾರು 40 ಜಾನುವಾರುಗಳನ್ನು ರಕ್ಷಿಸಿರುವ ಘಟನೆ ತಾಲೂಕಿನ ಕಳ್ಳನಕೆರೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ಜಾನುವಾರುಗಳನ್ನು ಸಾದಿಕ್ ಅಹ್ಮದ್ ಅವರಿಗೆ ಸೇರಿದ ಕಂಟೈನರ್ ಗೂಡ್ಸ್ ವಾಹನ(ಕೆಎ.11.ಬಿ.4235) ದಲ್ಲಿ ತುಂಬಿ ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು. ಈ ಸಂಬಂಧ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ಗೌಜ್ಞಾನ್ ಫೌಂಡೇಶನ್ ಎನ್‌ಜಿಒ ಸಂಸ್ಥೆಯ ಸ್ವಯಂ ಸೇವಕರು ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿರುವ ಬಗ್ಗೆ ಪೊಲೀಸ್ ಕಂಟ್ರೋಲ್ ರೂಂ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ಬಂದ ಕಿಕ್ಕೇರಿ ಪೊಲೀಸರು ಕಳ್ಳತನಕೆರೆ ವೀರಭದ್ರೇಶ್ವರ ದೇವಸ್ಥಾನದ ಬಳಿ ವಾಹನವನ್ನು ತಡೆದಿದ್ದಾರೆ. ಕೂಡಲೇ ಜಾನುವಾರು ತುಂಬಿದ್ದ ಕಂಟೈನರ್ ವಾಹನದ ಚಾಲಕ ಮತ್ತು ಕ್ಲೀನರ್ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. 40 ಜಾನುವಾರುಗಳನ್ನು ಚಿಕ್ಕ ವಾಹನದಲ್ಲಿ ಅಮಾನವೀಯವಾಗಿ ವಾಹನದಲ್ಲಿ ತುಂಬಿ ಸಾಗಾಣಿಕೆ ಮಾಡಲಾಗುತ್ತಿತ್ತು. ಒಂದೆರಡು ಜಾನುವಾರುಗಳು ಕೆಳಗೆ ಬಿದ್ದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಅಕ್ರಮ ಗೋವುಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ.
ಈ ಅಕ್ರಮ ಗೋವು ಸಾಗಾಟದಲ್ಲಿ ತೊಡಗಿರುವ ಅಕ್ರಮ ಸಾಗಣೆದಾರರು ಮತ್ತು ಸುಮಾರು 50 ಸಹಚರರು ಸ್ಥಳದಲ್ಲೇ ಜಮಾಯಿಸಿ ಗೌಜ್ಞಾನ್ ಫೌಂಡೇಷನ್ ಸ್ವಯಂ ಸೇವಕರಿಗೆ ಬೆದರಿಕೆ ಹಾಕಿ ಹಲ್ಲೆ ಮಾಡಲು ಪ್ರಯತ್ನಿಸಿದರು. ಆಗ ಸ್ಥಳದಲ್ಲಿದ್ದ ಪೊಲೀಸರು ಮಾಹಿತಿ ನೀಡಿದ ಸ್ವಯಂ ಸೇವಕರಿಗೆ ರಕ್ಷಣೆ ನೀಡಿ ಅಕ್ರಮವಾಗಿ ಗೋವುಗಳ ಸಾಗಾಟ ಮಾಡುತ್ತಿರುವವರ ಬಗ್ಗೆ ಮಾಹಿತಿ ನೀಡಿದವರಿಗೆ ಬೆದರಿಕೆ ಹಾಕಿದರೆ ಎಲ್ಲರ ಮೇಲೂ ಎಫ್.ಐ.ಆರ್ ದಾಖಲಿಸಿ ಬಂಧಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ನಂತರ ಅಕ್ರಮ ಗೋಸಾಗಾಟದಾರರ ಬೆಂಬಲಿಗರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಈ ಸಂಬಂಧ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೋವುಗಳಿಗೆ ಠಾಣೆಯ ಆವರಣದಲ್ಲಿ ಮೇವು ವ್ಯವಸ್ಥೆ ಕಲ್ಪಿಸಲಾಗಿದೆ.