ಕಾರವಾರ: ವರದಿಗಾರರು ಎಂದು ಅಧಿಕಾರಿಯೊಬ್ಬರನ್ನು ಹೆದರಿಸಿ ಹಣ ಕೊಡುವಂತೆ ಬೆದರಿಕೆ ಹಾಕಿದ್ದ ಇಬ್ಬರನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಮೂಲದ ಸಮಂತ ನಾರಾಯಣ ರಾವ್ ಹಾಗೂ ವಿಜಯ ಚಲುವರಂಗಯ್ಯ ಎನ್ನುವವರೇ ಬಂಧಿತ ಆರೋಪಿಗಳಾಗಿದ್ದಾರೆ.
ಈ ಇಬ್ಬರು ಆರೋಪಿಗಳು ಕಾರವಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಯೋರ್ವರಿಗೆ ದೂರವಾಣಿ ಮೂಲಕ ಕರೆ ಮಾಡಿ ತಾವು ಕರ್ನಾಟಕದ ಪ್ರಮುಖ ಸುದ್ದಿವಾಹಿನಿಯವರಾಗಿದ್ದು ನೀವು ಅಕ್ರಮವಾಗಿ ಹಣ ಹಾಗೂ ಆಸ್ತಿ ಸಂಪಾದಿಸಿದ್ದೀರಿ.
ಅದನ್ನು ನಾವು ಸುದ್ದಿ ವಾಹಿನಿಯಲ್ಲಿ ವೈರಲ್ ಮಾಡಬಾರದು ಎಂದಾದರೆ ತಮಗೆ 50 ಲಕ್ಷ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಆದರೆ ಬೆದರಿಕೆಗೆ ಜಗ್ಗದ ಅಧಿಕಾರಿಯು ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಕಾರವಾರ ನಗರಠಾಣೆ ಪೊಲೀಸರು ತನಿಖೆ ಕೈಗೊಂಡು ಬೆಂಗಳೂರಿಗೆ ತೆರಳಿ ಇಬ್ಬರೂ ಆರೋಪಿಗಳನ್ನು ಬಂಧಿಸಿ ಕರೆ ತಂದಿದ್ದಾರೆ.
ಆರೋಪಿಗಳಿಂದ ನಾಲ್ಕು ಮೊಬೈಲ್ ಹಾಗೂ ಒಂದು ಕಾರು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯದ ಎದುರು ಹಾಜರು ಪಡಿಸಲಾಗಿದ್ದು ತನಿಖೆ ಮುಂದುವರಿದಿದೆ.
ಕಾರ್ಯಾಚರಣೆಯಲ್ಲಿ ಸಂತೋಷ ಕುಮಾರ್ ಎಂ., ಪಿ.ಎಸ್.ಐ ಕಾರವಾರ ನಗರ ಠಾಣೆ ಮತ್ತು ಸಿಬ್ಬಂದಿಗಳಾದ ಜಟ್ಟಿ ನಾಯ್ಕ್, ಸೂರಜ್ ನಾಯ್ಕ್, ಪಿಸಿ – ರಾಜೇಶ್ ನಾಯಕ, ರಾಮಾ ನಾಯ್ಕ್, ನಾಂದ್ರೆ, ರಮೇಶ್ ಇತರರು ಕಾರ್ಯಾಚರಣೆ ತಂಡದಲ್ಲಿದ್ದರು.