ಕಾರವಾರ: ಪ್ರವೀಣ್ ನಿಟ್ಟೂರು ಹತ್ಯೆಗೆ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿ ಸ್ವಪಕ್ಷದ ಸರ್ಕಾರದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದ ಕಾರವಾರ ಬಿಜೆಪಿ ಯುವಮೋರ್ಚಾ ಪದಾಧಿಕಾರಿಗಳು, ಸುದ್ದಿಗೋಷ್ಠಿ ನಡೆಸಿ ಕ್ಷಮಾಪಣೆ ಕೋರಿದ್ದಾರೆ.
ನಗರದ ಪತ್ರಿಕಾಭವದಲ್ಲಿ ಸುದ್ದಿಗೋಷ್ಠಿ ನಡೆಸಿದ ನಗರ ಯುವ ಮೋರ್ಚಾದ ಅಧ್ಯಕ್ಷ ಶುಭಂ ಕಳಸ ಮಾತನಾಡಿ ಹತ್ಯೆಯಾದ ಪ್ರವೀಣ್ ನಮ್ಮ ಬಿಜೆಪಿ ಕುಟುಂಬದವರು. ಒಂದೇ ಮನೆಯ ಮಕ್ಕಳಾದ ಕಾರಣ ನಮಗೆ ಆತನ ಹತ್ಯೆಯನ್ನು ಅರಗಿಸಿಕೊಳ್ಳಲಾಗಿಲ್ಲ. ಹೀಗಾಗಿ ನೋವಿನಲ್ಲಿ ಉಂಟಾದ ಆವೇಷದಲ್ಲಿ ನಿನ್ನೆ ಆಕ್ರೋಶಭರಿತರಾಗಿ ಮಾತನಾಡಿದೆವು. ಕುಟುಂಬದಲ್ಲಿ ಸಣ್ಣಪುಟ್ಟ ಗಲಾಟೆಗಳು ಇರುವುದೇ. ಹೀಗಾಗಿ ನಾವು ನಿನ್ನೆ ಆಕ್ರೋಶ ಭರಿತರಾಗಿ ಮಾಡಿದ್ದ ಗಲಾಟೆಯ ಕಾರಣ ಮನೆಯ ಮಕ್ಕಳಿಗೆ ನಾಯಕರುಗಳೆಲ್ಲ ಬುದ್ಧಿವಾದ ಹೇಳಿದ್ದಾರೆ. ಹೀಗಾಗಿ ನೀಡಿದ್ದ ರಾಜೀನಾಮೆಯನ್ನೂ ಹಿಂತೆಗೆದುಕೊಳ್ಳುತ್ತಿದ್ದೇವೆ. ನಾವು ಮಾಡಿದ ಒಂದು ಸಣ್ಣ ತಪ್ಪು ಪಕ್ಷಕ್ಕೆ ಬಹಳ ಮುಜುಗರ ತಂದಿದೆ. ಇನ್ನೆಂದು ಕೂಡ ಇಂಥ ತಪ್ಪನ್ನು ನಾವು ಮಾಡುವುದಿಲ್ಲ ಎಂದರು.
ಮುಖ್ಯಮಂತ್ರಿಗಳು ಜಿಲ್ಲೆಗೆ ಬಂದರೆ ಪ್ರತಿಭಟಿಸುತ್ತೇವೆ ಎಂದಿದ್ದೆವು. ಗುರುವಾರ ನಾವು ಮನವಿ ಸಲ್ಲಿಸಿದ ಕೆಲ ಕ್ಷಣಗಳಲ್ಲೇ ಮುಖ್ಯಮಂತ್ರಿಗಳು ಪ್ರವೀಣ್ ಅವರ ಮನೆಗೆ ಭೇಟಿ ನೀಡಿ ಪರಿಹಾರ ನೀಡಿದ್ದಾರೆ. ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಆರೋಪಿತರುಗಳನ್ನು ಬಂಧಿಸಲಾಗಿದೆ. ಇದೀಗ ಎನ್‌ಐಗೆ ಪ್ರಕರಣವನ್ನು ವಹಿಸಲಾಗುತ್ತಿದೆ. ಹೀಗಾಗಿ ಮುಖ್ಯಮಂತ್ರಿಗಳು ಬರುವ ವೇಳೆ ಪ್ರತಿಭಟಿಸುತ್ತೇವೆಂದು ಏನು ಹೇಳಿದ್ದೆವೋ, ಅದಕ್ಕಿಂತ ನಾಲ್ಕು ಪಟ್ಟು ಅದ್ಧೂರಿಯಾಗಿ ಯುವಮೋರ್ಚಾದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೆಲ್ಲ ಸೇರಿ ಮುಖ್ಯಮಂತ್ರಿಗಳ ಜಿಲ್ಲಾ ಭೇಟಿಯ ವೇಳೆ ಸ್ವಾಗತ ಕೋರುತ್ತೇವೆ ಎಂದಿದ್ದಾರೆ.
ಪ್ರವೀಣ್ ಹತ್ಯೆ ಖಂಡಿಸಿ ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲೆಂದು ಕಾರವಾರದ ಜಿಲ್ಲಾಧಿಕಾರಿ ಕಚೇರಿಯೆದುರು ಸೇರಿದ್ದ ಬಿಜೆಪಿ ಗ್ರಾಮೀಣ ಮತ್ತು ನಗರ ಯುವಮೋರ್ಚಾ ಪದಾಧಿಕಾರಿಗಳು, ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, 42 ಮಂದಿ ರಾಜೀನಾಮೆ ಸಲ್ಲಿಸಿದ್ದರು.
ಅಷ್ಟೇ ಅಲ್ಲದೇ, ನಗರ ಯುವಮೋರ್ಚಾ ಅಧ್ಯಕ್ಷ ಶುಭಂ ಕಳಸ ಸರ್ಕಾರ, ಮುಖ್ಯಮಂತ್ರಿಗಳ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದರು. ಪತ್ರಿಕಾಗೋಷ್ಠಿಯಲ್ಲಿ ಪ್ರಣವ್ ರಾಣೆ, ಶೇಖರ್ ನಾಯ್ಕ, ಸುಭಾಷ್ ಗುನಗಿ, ನಾಗರಾಜ್ ದುರ್ಗೇಕರ್, ಅಜಯ್ ಜೋಶಿ, ಅವಿನಾಶ್ ಜೋಗಳಗೇಕರ್, ಮಂಜುನಾಥ್ ಗೌಡ, ಅಮರ್ ನಾಯ್ಕ, ಪುನೀತ್ ಕಲ್ಗುಟ್ಕರ್. ಇದ್ದರು.