ಕಾರವಾರ: ಜಿಲ್ಲೆಯಲ್ಲಿ ಯಾವುದೇ ಆಹಾರ ಪದಾರ್ಥಗಳಲ್ಲಿ, ಬೆಳೆಗಳಲ್ಲಿ ಕಲಬೆರೆಕೆ ಹಾಗೂ ಹಣ್ಣು ಉತ್ಪಾದನೆಯಲ್ಲಿ ಕೃತಕವಾಗಿ ಹಣ್ಣುಗಳನ್ನು ಮಾಡಲಾಗುತ್ತಿದ್ದರೆ, ಆರೋಗ್ಯ ಇಲಾಖೆಯೂ ಆಯಾ ತಾಲೂಕುಗಳಲ್ಲಿ ಆಂದೋಲನ ಮಾಡಿ ಪರೀಶಿಲನೆ ನಡೆಸಿ, ಕಲಬೆರೆಕೆ ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತುರ್ತು ಸಮಯದಲ್ಲಿ ಅಂಬುಲೇನ್ಸ್ ಕೊರತೆ ಉಂಟಾಗುತ್ತಿದ್ದು, ಜಿಲ್ಲೆಯಲ್ಲಿ ಇರುವಂತಹ ಅಂಬುಲೆನ್ಸ್ಗಳಿಗೆ ಒಂದು ಸಹಾಯವಾಣಿ ಮಾಡಿ ಜಿಲ್ಲೆಯಲ್ಲಿರುವಂತಹ ಜನರಿಗೆ ತುರ್ತು ಸಮಯದಲ್ಲಿ ಯಾವುದೆ ತೊಂದರೆಯಾಗದಂತೆ 24×7 ಸೇವೆ ನೀಡಬೇಕು ಎಂದು ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಣಸಿಘಟ್ಟದಲ್ಲಿ ನೆರೆಹಾವಳಿಯಿಂದಾಗಿ ಪ್ರತಿ ವರ್ಷ ಗುಡ್ಡ ಕುಸಿತವಾಗುತ್ತಿದ್ದು ಈ ಸಮಸ್ಯೆಗೆ ಸಮರ್ಪಕವಾಗಿ ಶಾಶ್ವತ ಪರಿಹಾರಕ್ಕಾಗಿ ಅಧಿಕಾರಿಗಳು ಸಮೀಕ್ಷೆ ನಡೆಸಿ ರಸ್ತೆ ದುರಸ್ತಿ ಕೈಗೊಳ್ಳಬೇಕು. ನೆರೆ ಹಾವಳಿಯಿಂದಾಗಿ ಹಾಳಾದ ಹಾಗೂ ದುರಸ್ತಿಗೊಳಿಸಬೇಕಾದ ರಸ್ತೆಗಳನ್ನು ಕೂಡಲೇ ದುರಸ್ತಿ ಮಾಡಬೇಕು ಎಂದು ಪಿ.ಡೆಬ್ಲು ಡಿ ಅಧಿಕಾರಿಗಳಿಗೆ ಹೇಳಿದರು.
ಜಿಲ್ಲೆಯಲ್ಲಿ ಸೀಮೆಎಣ್ಣೆ, ಕುಚಲಕ್ಕಿಯ ಕೊರತೆ ಉಂಟಾಗಿದ್ದು, ಕರಾವಳಿ ಜಿಲ್ಲೆಯ ಒಟ್ಟು ತಾಲೂಕುಗಳಲ್ಲಿ ಎಷ್ಟು ಪ್ರಮಾಣ ಕುಚ್ಲಕ್ಕಿ ಪೂರೈಕೆಯಾಗಬೇಕು ಎಂದು ಸಮೀಕ್ಷೆ ಕೈಗೊಂಡು ವರದಿ ನೀಡಬೇಕು, ವರದಿ ನೀಡಿದ ನಂತರ ಈ ಸಮಸ್ಯೆಗೆ ಪರಿಹಾರ ಕೈಗೊಳ್ಳಲಾಗುವುದು. ಸೀಮೆಎಣ್ಣೆ ಕೊರತೆ ಕುರಿತು ಉತ್ತರ ಕನ್ನಡ ಶಾಸಕರೆಲ್ಲರು ಸೇರಿ ಸರ್ಕಾರದ ಜೊತೆಗೆ ಮಾತನಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.
ಹರ್ ಘರ ತಿರಂಗಾ ಅಭಿಯಾನಕ್ಕಾಗಿ ಎನ್.ಆರ್.ಎಲ್.ಎಮ್ ಸ್ವಸಹಾಯ ಸಂಘದಡಿಯಲ್ಲಿ ರಾಷ್ಟçಧ್ವಜಗಳನ್ನು ಹೊಲಿಸಲಾಗುತ್ತಿದ್ದು, ಹೊಲಿಸಿದಂತಹ ಧ್ವಜಗಳನ್ನು ಗ್ರಾಮ ಪಂಚಾಯತ್ಗಳಲ್ಲಿ ಕೊಡಲಾಗಿದ್ದು, ಗ್ರಾಮ ಪಂಚಾಯತಗಳಲ್ಲಿ ೩೦ ರೂ ದರ ನಿಗದಿ ಪಡಿಸಲಾಗಿದ್ದು, ಜಿಲ್ಲೆಯ ಕಟ್ಟ ಕಡೆಯ ಮನೆಯಲ್ಲಿಯೂ ಸಹ ಆ. ೧೩ ರಿಂದ ೧೫ ರ ವರೆಗೆ ತ್ರಿವರ್ಣ ಧ್ವಜ ಹಾರಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಆದೇಶ ನೀಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪ್ರೀಯಾಂಗಾ ಎಂ, ಪೋಲಿಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೆಕರ್, ಭಟ್ಕಳ ಶಾಸಕ ಸುನೀಲ್ ನಾಯ್ಕ ಹಾಗೂ ಎಲ್ಲ ಇಲಾಖೆ ಅಧಿಕಾರಿಗಳು ಇದ್ದರು.