ಕಾರವಾರ: ಭಾರತವು ಸ್ವಾತಂತ್ರ್ಯಗೊಂಡು 75 ವರ್ಷಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ಆಚರಿಸಲಾಗುತ್ತಿರುವ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನವನ್ನು ಸರಕಾರ ಹಮ್ಮಿಕೊಂಡಿದೆ. ಈ ಅಭಿಯಾನಕ್ಕಾಗಿ ಭಾರತೀಯ ಜನತಾ ಪಕ್ಷವು ಇದುವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ 60 ಸಾವಿರಕ್ಕೂ ಹೆಚ್ಚಿನ ಧ್ವಜಗಳನ್ನು ವಿತರಣೆ ಮಾಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಹರ ಘರ್ ತಿರಂಗಾ ಅಭಿಯಾನದ ನಿಮಿತ್ತ ಉತ್ತರ ಕನ್ನಡದಲ್ಲಿರುವ 3.44 ಲಕ್ಷ ಮನೆಗಳ ಮೇಲೆ ಆಗಸ್ಟ್ 13 ರಿಂದ 15 ರವರೆಗೆ ತ್ರಿವರ್ಣ ಧ್ವಜ ಹಾರಿಸಲು ಬಿಜೆಪಿ ಗುರಿಯನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಆ.10 ರಿಂದ ಮೂರು ದಿನಗಳ ಕಾಲ ಪ್ರತಿ ಮನೆಗೆ ತೆರಳಿ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಬಿಜೆಪಿ ಕಾರ್ಯಕರ್ತರು ಮಾಡಲಿದ್ದಾರೆ. ಈಗಾಗಲೇ ವಿವಿಧ ಸಂಘಟನೆಗಳಿಂದ, ಸರಕಾರದಿಂದ ಧ್ವಜ ವಿತರಿಸುವ ಕಾರ್ಯ ನಡೆದಿದೆ. ಕಡಿಮೆ ಬಿದ್ದು ಯಾರಿಗಾದರೂ ದೊರೆಯದಿದ್ದಲ್ಲಿ ಅಂತಹ ಮನೆಗಳಿಗೂ ತಲುಪಿ ಅವರಿಗೆ ಧ್ವಜ ಪೂರೈಸುವ ಕಾರ್ಯವನ್ನು ಬಿಜೆಪಿ ಕಾರ್ಯಕರ್ತರು ಮಾಡಲಿದ್ದಾರೆ. ಈಗಾಗಲೇ 60 ಸಾವಿರಕ್ಕಿಂತ ಹೆಚ್ಚು ಧ್ವಜಗಳನ್ನು ಬಿಜೆಪಿಯು ತನ್ನ ಸಂಘಟನೆಯ ಮೂಲಕ ನಡೆಸಿದೆ ಎಂದರು. ಮುಂದಿನ ದಿನಗಳಲ್ಲಿ ಯುವ ಮೋರ್ಚಾ ವತಿಯಿಂದ ಪ್ರತಿ ಮಂಡಲದಲ್ಲಿ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಹಳಿಯಾಳ ಹಾಗೂ ಮುಂಡಗೋಡ ಭಾಗದಲ್ಲಿ ರೈತ ಮೋರ್ಚಾದವರು ಟ್ರಾಕ್ಟರ್ ಹಾಗೂ ಚಕ್ಕಡಿ ಗಾಡಿಗಳ ಮೂಲಕ ರ‍್ಯಾಲಿ ನಡೆಸಿ ಜಾಗೃತಿ ಮೂಡಿಸಲಿದ್ದಾರೆ. ಈ ಮೂಲಕ ಪ್ರತಿ ಮನೆಯಲ್ಲಿಯೂ ರಾಷ್ಟçಧ್ವಜ ಹಾರಾಡಲಿದ್ದು ಪ್ರಧಾನಿ ಮೋದಿಯವರ ಕರೆಗೆ ಎಲ್ಲರೂ ಸ್ಪಂದಿಸಲಿದ್ದಾರೆ ಎಂದರು.
ಎಲ್ಲರೂ ಸಾಥ್ ನೀಡಿ: ರೂಪಾಲಿ
ಶಾಸಕಿ ರೂಪಾಲಿ ನಾಯ್ಕ ಮಾತನಾಡಿ ಹರ್ ಘರ್ ತಿರಂಗಾ ಅಭಿಯಾನದ ಕುರಿತು ಕೆಲವರು ನಕಾರಾತ್ಮಕ ಚಿಂತನೆಗಳನ್ನು ಮಾಡುವುದು ಬಿಡಬೇಕು. ಧ್ವಜ ಹಾರಿಸುವಾಗ ಅದು ಬಿದ್ದರೆ, ಸರಿಯಾಗಿ ಹಾರಿಸದಿದ್ದರೆ ಧ್ವಜಕ್ಕೆ ಅವಮಾನವಾಗುತ್ತದೆ ಎನ್ನುವ ರೀತಿಯಲ್ಲಿ ನೆಗೆಟಿವ್ ಥಿಂಕ್ ಮಾಡುವುದನ್ನು ಬಿಡಬೇಕು. ನಮ್ಮ ದೇಶಪ್ರೇಮವನ್ನು ನಾವು ಮೆರೆಯಬೇಕು. ಧ್ವಜ ಹಾರಿಸುವ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ಆದರೆ ಅದು ಈ ಹಿಂದೆ ಎಲ್ಲರಿಗೂ ಸಾಧ್ಯವಾಗುತ್ತಿರಲಿಲ್ಲ. ಈ ಬಾರಿ ಅದಕ್ಕೊಂದು ಅವಕಾಶ ದೊರೆತಿದೆ. ಹೀಗಾಗಿ ಎಲ್ಲ ಮುಂಜಾಗೃತೆಯನ್ನು ವಹಿಸಿಕೊಂಡು ಪಾಸಿಟಿವ್ ಆಲೋಚನೆಯನ್ನು ಮಾಡಿ ಶ್ರದ್ಧಾ ಭಕ್ತಿಯಿಂದ ನೆರವೇರಿಸಿಕೊಂಡು ಯಾವುದೇ ತಪ್ಪಾಗದಂತೆ ಹಾರಿಸಿ ದೇಶಪ್ರೇಮ ಮೆರೆಯ ಬೇಕು ಎಂದರು. ಪ್ರಧಾನಿ ಮೋದಿಯವರು ಅನೇಕ ಯೋಜನೆಗಳ ಮೂಲಕ ಭಾರತವನ್ನು ಒಂದು ಒಳ್ಳೆಯ ಹಂತಕ್ಕೆ ತಲುಪಿಸಿದ್ದಾರೆ. ಅವರ ಕರೆಗೆ ಸ್ಪಂದಿಸಿ ಎಲ್ಲರೂ ಒಗ್ಗಟ್ಟಾಗಿ ಈ ಹರ್ ಘರ್ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸೋಣ ಎಂದರು. ಈಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ನಿತಿನ್ ಪಿಕಳೆ, ಬಿಜೆಪಿ ವಕ್ತಾರ ನಾಗರಾಜ್ ನಾಯಕ, ನಗರಾಧ್ಯಕ್ಷ ನಾಗೇಶ ಕುರ್ಡೇಕರ್, ಗ್ರಾಮೀಣಾಧ್ಯಕ್ಷ ಸುಭಾಶ ಗುನಗಿ ಹಾಗೂ ಸೇರಿದಂತೆ ಹಲವು ಮುಖಂಡರು ಇದ್ದರು.