ಕಾರವಾರ: ಭಾರತೀಯ ಜನತಾ ಪಾರ್ಟಿಯು ಈವರೆಗೆ ಆರ್‌ಎಸ್‌ಎಸ್ ಸೇರಿದಂತೆ ತಮ್ಮ ಪಕ್ಷದ ಕಚೇರಿಗಳ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸಿಲ್ಲ. ಆದರೆ ಈಗ ಏಕಾಎಕಿ ದೇಶಾಭಿಮಾನ ಉಕ್ಕಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಶಂಭು ಶೆಟ್ಟಿ ಆರೋಪಿಸಿದರು.
ಕಾರವಾರದ ಅಂಚೆ ಕಚೇರಿಯ ಬಳಿ ನಗರಸಭೆ ಹಾಗೂ ಅಂಚೆ ಇಲಾಖೆ ನೀಡಿದ ರಾಷ್ಟ್ರ ಧ್ವಜಗಳಲ್ಲಿರುವ ನ್ಯೂನ್ಯತೆಗಳ ಬಗ್ಗೆ ಮಾತನಾಡಿ, ಹಿಂದೆ ರಾಷ್ಟ್ರ ಧ್ವಜದ ನಿರ್ಮಾಣದ ಚರ್ಚೆ ಬಂದಾಗ ಸಂಘಪರಿವಾರದ ಪೂರ್ವಜರಾದ ಹಿಂದೂ ಮಹಾಸಭಾದವರು ಭಗವಾ ಧ್ವಜವನ್ನು ರಾಷ್ಟ್ರ ಧ್ವಜವನ್ನಾಗಿಸಿ ಎಂದಿದ್ದರು. ಅಂದಿನಿಂದಲೂ ರಾಷ್ಟ್ರ ಧ್ವಜವನ್ನು ದ್ವೇಶಿಸಿಕೊಂಡು ಬಂದವರಿಗೆ ಈಗ ಏಕಾಎಕಿ ದೇಶಾಭಿಮಾನ ಉಕ್ಕಿದೆ. ಆದರೆ ಮನೆ ಮನೆಗಳಲ್ಲಿ ಸ್ವಾತಂತ್ರ್ಯ ಮಹೋತ್ಸವ ಮಾಡಲು ಹೊರಟು ಧ್ವಜ ಸಂಹಿತೆಗೆ ಅವಮಾನ ಮಾಡುವುದು ಸರಿಯಲ್ಲ ಎಂದರು.
ರಾಷ್ಟ್ರಧ್ವಜವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವುದು ಸರಿಯಲ್ಲ. ಈಗಾಗಲೇ ಕಾರವಾರ ನಗರಸಭೆಯಿಂದ 25 ರೂ. ಹಣ ಪಡೆದು ಒಂದು ಧ್ವಜ ನೀಡುತ್ತಿದೆ. ಅಲ್ಲದೇ ಅಂಚೇ ಕಚೇರಿಯಿಂದಲೂ ಧ್ವಜಗಳನ್ನು ವಿತರಿಸಲಾಗುತ್ತಿದೆ. ಆದರೆ ಅವುಗಳಲ್ಲಿ ಧ್ವಜ ಸಂಹಿತೆಗೆ ಅವಮಾನ ಮಾಡಲಾಗಿದೆ. ಧ್ವಜದಲ್ಲಿ ಪ್ರತಿ ಬಣ್ಣದ ಪಟ್ಟಿಯೂ ಒಂದೇ ಅಳತೆಯಲ್ಲಿರಬೇಕು ಹಾಗೂ ಅಶೋಕ ಚಕ್ರವು ಧ್ವಜದ ಮಧ್ಯದಲ್ಲಿರಬೇಕು. ಆದರೆ ಬಿಜೆಪಿ ಸರಕಾರವು ವಿತರಿಸಿದ ಧ್ವಜದಲ್ಲಿ ಹೀಗಿಲ್ಲ.
ಧ್ವಜವೇ ಬೇರೆ ಆಕಾರದಲ್ಲದ್ದು ಒಂದೊಂದು ಬಣ್ಣವೂ ಒಂದೊಂದು ಅಳತೆಯಲ್ಲಿವೆ. ಜತೆಗೆ ಅಶೋಕ ಚಕ್ರವೂ ಕೂಡ ಧ್ವಜದ ಮಧ್ಯದಲ್ಲಿಲ್ಲದೇ ಧ್ವಜ ಸಂಹಿತೆಗೆ ಅವಮಾನ ಮಾಡುತ್ತಿದ್ದಾರೆ. ದೇಶ ಭಕ್ತಿಯನ್ನು ರಾಜಕೀಯವಾಗಿ ಬಳಸಿಕೊಂಡು ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಬಿಜೆಪಿ ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಯೂತ್ ಕಾಂಗ್ರೆಸ್‌ನ ಕಾರ್ಯದರ್ಶಿ ಸೈಸದ್ ಅಶ್ರಫ್ ಖಾದ್ರಿ, ಸೂರಜ್ ನಾಯ್ಕ, ಅಲಿ ಖುರೇಸಿ ಹಾಗೂ ದೇವಾನಂದ ಠಾಣೇಕರ ಇದ್ದರು.