ಕಾರವಾರ: ಇಲ್ಲಿನ ಅಕ್ಕಸಾಲಿಗರೊಬ್ಬರು ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕಾಗಿ ಸಂಸತ್ ಭವನ ಹೋಲುವ ಪುಟ್ಟ ಕಲಾಕೃತಿಯನ್ನ ಬೆಳ್ಳಿಯಲ್ಲಿ ರಚಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ತಾಲೂಕಿನ ಕಡವಾಡದ ಮಿಲಿಂದ್ ಅಣ್ವೇಕರ್ ಸಂಸತ್ ಭವನವನ್ನ ಸುಂದರವಾಗಿ ಬೆಳ್ಳಿಯಲ್ಲಿ ಕೆತ್ತಿದ್ದಾರೆ. ಸುಮಾರು 35 ಗ್ರಾಂ ತೂಕದ ಈ ಸಂಸತ್ ಭವನದ ಮಾದರಿ, ಐದು ದಿನಗಳಲ್ಲಿ ತಯಾರಾಗಿದೆ. ಎರಡು ಇಂಚು ಅಗಲ, ಒಂದೂವರೆ ಇಂಚು ಉದ್ದದ ಈ ಬೆಳ್ಳಿಯ ಕಲಾಕೃತಿ ಥೇಟ್ ಸಂಸತ್ ಭವನದಂತೆಯೇ ಇದೆ.
ನಿಜ ಸಂಸತ್ ಭವನದಂತೆಯೇ ಕಮಾನುಗಳು, ಮೆಟ್ಟಿಲು, ಭವನದ ಮೇಲೆ ಧ್ವಜವನ್ನೂ ನಿರ್ಮಿಸಲಾಗಿದೆ. ಈ ಮೂಲಕ ಆಜಾ ದಿ ಕಾ ಅಮೃತ್ ಮಹೋತ್ಸವವನ್ನ ವಿಭಿನ್ನವಾಗಿ ಆಚರಿಸಲು ಮಿಲಿಂದ್ ಅಣ್ವೇಕರ್ ಮುಂದಾಗಿದ್ದಾರೆ. ಈ ಹಿಂದೆಯೂ ಸಹ ಚಿನ್ನ, ಬೆಳ್ಳಿಯ ವಿವಿಧ ಕಲಾಕೃತಿಗಳನ್ನು ಅವರು ರಚಿಸಿದ್ದರು.