News Kannada
Friday, March 31 2023

ಉತ್ತರಕನ್ನಡ

ಗೋಕರ್ಣ: ಮಹಾಧ್ಯೇಯಕ್ಕೆ ಸಮರ್ಪಿಸಿಕೊಳ್ಳೋಣ- ರಾಘವೇಶ್ವರ ಶ್ರೀ ಕರೆ

Gokarna: Siddheshwara Sri Jnanaloka Mahachetana - Raghaveshwara Sri
Photo Credit : By Author

ಗೋಕರ್ಣ: ಧೈರ್ಯದ ಕಾರಣದಿಂದ ವ್ಯಕ್ತಿಯೊಬ್ಬ ಅಮರನಾಗಬಲ್ಲ; ಮಹಾಧ್ಯೇಯವೊಂದಕ್ಕೆ ನಮ್ಮ ಸರ್ವಸ್ವವನ್ನೂ ಸಮರ್ಪಿಸಿಕೊಂಡಾಗ ನಮಗೆ ಅಪೂರ್ವ ಧೈರ್ಯ ಬರುತ್ತದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು.

ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಗುರುವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಜಟಾಯುವಿಗೆ ರಾವಣನನ್ನು ಕಂಡು ಭಯವಾದರೂ, ಸೀತೆಯನ್ನು ರಕ್ಷಿಸಬೇಕು ಎಂಬ ಭಾವ ಆತನಿಗೆ ಧೈರ್ಯ ತಂದು ಕೊಡುತ್ತದೆ. ರಾವಣನ ಸಾವಿರ ಬಾಣವನ್ನು ಎದುರಿಸಿಯೂ ಸಾಯದೇ ಉಳಿದದ್ದು, ಸೀತೆಯನ್ನು ಉಳಿಸಬೇಕು ಎಂಬ ಧ್ಯೇಯದ ಕಾರಣದಿಂದ ಎಂದು ಉಲ್ಲೇಖಿಸಿದರು.

ಧೈರ್ಯ ನಮಗೆ ಸಾವಿರ ಜನರ ಶಕ್ತಿ ನೀಡಬಲ್ಲದು. ಇಲ್ಲದ ಶಕ್ತಿಯನ್ನು ಇದು ತಂದುಕೊಡುತ್ತದೆ. ಭಯಪಟ್ಟವನಿಗೆ ಇರುವ ಶಕ್ತಿಯೇ ಕುಂದಿ ಹೋಗುತ್ತದೆ. ಸಹಜ ಯೋಗ್ಯತೆಗಿಂತ ಬಹುದೊಡ್ಡ ಶಕ್ತಿ ಧೈರ್ಯದಿಂದ ಬರುತ್ತದೆ ಎಂದು ಭಾರತೀಯ ಸೈನಿಕನೊಬ್ಬನ ನಿದರ್ಶನವನ್ನು ವಿವರಿಸಿದರು.

1962ರ ಭಾರತ- ಚೀನಾ ಯುದ್ಧದ ಸಂದರ್ಭದಲ್ಲಿ ತವಾಂಗ್ ಪ್ರದೇಶ ದಾಟಿ ಚೀನಾ ಮುಂದೆ ಬರುತ್ತಿತ್ತು. ಭಾರತದಲ್ಲಿ ಅಪಾರ ಸಾವು ನೋವು, ಶಸ್ತ್ರಾಸ್ತ್ರ ಕೊರತೆ ಉಂಟಾಯಿತು. ಆ ಪ್ರದೇಶವನ್ನು ಬಿಟ್ಟು ಹಿಂದಕ್ಕೆ ಬರುವಂತೆ ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು ಸೂಚನೆ ನೀಡುತ್ತಾರೆ. ಆದರೆ ಜಸ್ವಂತ್ ಸಿಂಗ್ ರಾವತ್ ಎಂಬ ವೀರಯೋಧ ತವಾಂಗ್ ಪ್ರದೇಶದಲ್ಲಿ ಏಕಾಂಗಿಯಾಗಿ 72 ಗಂಟೆ ಹೋರಾಟ ನಡೆಸಿ 300 ಮಂದಿ ಚೀನಿ ಸೈನಿಕರನ್ನು ಕೊಲ್ಲುತ್ತಾನೆ. ಸೇಲಾ ಹಾಗೂ ನೂರಾ ಎಂಬ ಇಬ್ಬರು ಮಹಿಳೆಯರು ಈತನಿಗೆ ಸಹಾಯ ಮಾಡುತ್ತಾರೆ. ಭಾರತದ ದೊಡ್ಡ ಪಡೆ ಇದೆ ಎಂಬ ಭ್ರಮೆ ಹುಟ್ಟಿಸಿ ಏಕಾಂಗಿ ಹೋರಾಟ ನಡೆಸುತ್ತಾನೆ. ಆದರೆ ಆಹಾರ ಪೂರೈಕೆ ಮಾಡುವ ಸಿಬ್ಬಂದಿಯೇ ಈತನ ಅಸಹಾಯಕತೆ ಬಗ್ಗೆ ವಿರೋಧಿ ಸೇನೆಗೆ ಮಾಹಿತಿ ನೀಡುತ್ತಾರೆ ಎಂದು ಯೋಧನ ಸಾಹಸಗಾಥೆ ವಿವರಿಸಿದರು.

ಚೀನಿ ಸೈನಿಕರು ಸುತ್ತುವರಿದಾಗ ಕೊನೆಗೆ ತನಗೆ ತಾನೇ ಗುಂಡು ಹಾರಿಸಿಕೊಂಡು ವೀರ ಮರಣವನ್ನಪ್ಪುತ್ತಾನೆ. ಆತನಿಗೆ ಮಹಾವೀರ ಚಕ್ರವನ್ನು ಮರಣೋತ್ತರವಾಗಿ ನೀಡಲಾಗುತ್ತದೆ. ಈತನ ಗೌರವಾರ್ಥ ಜಸ್ವಂತ್‍ಗಢ ಎಂಬ ಹೆಸರಿನಿಂದ ಆ ಪ್ರದೇಶವನ್ನು ಕರೆಯಲಾಯಿತು. ಆತನ ಹೆಸರಿನಲ್ಲಿ ದೇವಸ್ಥಾನ ನಿರ್ಮಿಸಲಾಗಿದೆ. ಮೃತಪಟ್ಟ ಬಳಿಕವೂ ಆತನ ಶಕ್ತಿ ಜಾಗೃತವಾಗಿದೆ ಎಂಬ ಭಾವನೆಯಿಂದ ಇಂದಿಗೂ ಆತನಿಗೆ ಪ್ರತಿದಿನ ಊಟ ನೀಡಲಾಗುತ್ತಿದೆ, ಬಡ್ತಿ, ರಜೆ ಮತ್ತಿತರ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತದೆ. ಈ ವೀರ ಯೋಧನಿಗೆ ಆ ದೈತ್ಯ ಶಕ್ತಿ ತಂದುಕೊಟ್ಟದ್ದು ಧೈರ್ಯ ಎಂದು ಬಣ್ಣಿಸಿದರು. ಯಾವ ಸಮಸ್ಯೆ ಬಂದರೂ ಧೃತಿಗೆಡದೇ ಧೈರ್ಯದಿಂದ ಅದನ್ನು ಎದುರಿಸುವ ಛಾತಿ ಬೆಳೆಸಿಕೊಳ್ಳಬೇಕು. ಶಾಂತ, ಸಹಜ ಮನಸ್ಥಿತಿಯಿಂದ ಎಂಥ ಸಾಧನೆಯನ್ನೂ ಮಾಡಬಹುದು. ಧೈರ್ಯಂ ಸರ್ವತ್ರ ಸಾಧನಂ ಎಂದು ಶಾಸ್ತ್ರಗಳು ಹೇಳುತ್ತವೆ. ಧೈರ್ಯ ಇಲ್ಲದವರು ಸಾಧನೆ ಮಾಡಲು ಸಾಧ್ಯವೇ ಇಲ್ಲ. ಇದು ಲೌಕಿಕ ಮತ್ತು ಪಾರಮಾರ್ಥಿಕ ಎರಡಕ್ಕೂ ಅನ್ವಯಿಸುತ್ತದೆ ಎಂದು ಹೇಳಿದರು.

See also  ಉತ್ತರ ಪ್ರದೇಶ: ದಲಿತ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ ಏಳು ಆರೋಪಿಗಳು ಬಂಧನ

ಚಾತುರ್ಮಾಸ್ಯ ಅಂಗವಾಗಿ ಗುರುವಾರ ಪಳ್ಳತ್ತಡ್ಕ ಶಂಕರನಾರಾಯಣ ಘನಪಾಠಿಗಳ ನೇತೃತ್ವದಲ್ಲಿ ಘನ ಪಾರಾಯಣ ನಡೆಯಿತು. ರುದ್ರಹವನ, ಚಂಡಿ ಪಾರಾಯಣ, ರಾಮತಾರಕ ಹವನ, ಚಂಡಿಹವನ, ಮಾತೆಯರಿಂದ ಕುಂಕುಮಾರ್ಚನೆ ನಡೆದವು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

178
Srinivas Badkar

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು