ಕಾರವಾರ: ಕಳೆದ 25 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ದೇಶಕ್ಕಾಗಿ ದುಡಿದಿದ್ದ ಯೋಧ, ಇದೀಗ ಸೇವಾನಿವೃತ್ತಿ ಪಡೆದುಕೊಂಡು ತನ್ನೂರಿಗೆ ವಾಪಸ್ಸಾಗಿದ್ದು, ಸೇನೆಯಲ್ಲಿ ಸೇವೆ ಸಲ್ಲಿಸಿ ಊರಿಗೆ ಮರಳಿದ ವೀರಯೋಧನಿಗೆ ಗ್ರಾಮಸ್ಥರು ಹಾರ ಹಾಕಿ, ಸನ್ಮಾನಿಸಿ, ಜೈಕಾರ ಹಾಕುವ ಮೂಲಕ ಅದ್ದೂರಿ ಸ್ವಾಗತ ಕೋರಿದರು.
ಕಾರವಾರ ತಾಲ್ಲೂಕಿನ ಕಡವಾಡದ ಭೋವಿವಾಡ ನಿವಾಸಿ, ಭಾರತೀಯ ಗಡಿ ಭದ್ರತಾ ಪಡೆಯ ಯೋಧ ಬಾಲಕೃಷ್ಣ ಭೋವಿ ಸುದೀರ್ಘ ಇಪ್ಪತ್ತೈದು ವರ್ಷಗಳನ್ನ ಸೇನೆಯಲ್ಲಿ ದೇಶ ಸೇವೆಗೆ ಮುಡಿಪಾಗಿಟ್ಟಿದ್ದರು. 1997ರಲ್ಲಿ ಬಿಎಸ್ಎಫ್ ಸೇರಿದ ಬಾಲಕೃಷ್ಣ, ಬಳಿಕ ಬೆಂಗಳೂರಿನಲ್ಲಿ ಖಾಯಂಮಾತಿ ಆದ ಬಳಿಕ ಇಂದೋರ್‌ನಲ್ಲಿ ತರಬೇತಿ ಪಡೆದುಕೊಂಡಿದ್ದರು.
ತರಬೇತಿ ಬಳಿಕ ಪಶ್ಚಿಮ ಬಂಗಾಳ, ಶಿಲ್ಲಾಂಗ್, ಜಮ್ಮುಕಾಶ್ಮೀರ, ಗುಜರಾತ್, ಪಂಜಾಬ್, ಛತ್ತೀಸ್‌ಗಢ್ ದಲ್ಲಿ ಸೇವೆಯನ್ನ ಸಲ್ಲಿಸಿದ್ದರು. ಅಲ್ಲದೇ 1999ರಲ್ಲಿ ನಡೆದಿದ್ದ ಕಾರ್ಗಿಲ್ ಯುದ್ಧದಲ್ಲಿಯೂ ಸಹ ಯೋಧ ಬಾಲಕೃಷ್ಣ ಭಾಗಿಯಾಗಿದ್ದು, ಧೈರ್ಯದಿಂದ ಹೋರಾಟ ನಡೆಸಿದ್ದರು.
ಇದೀಗ ಸೇವಾ ನಿವೃತ್ತಿಯನ್ನ ಪಡೆದು ಊರಿಗೆ ಮರಳಿದ್ದು ಅವರನ್ನ ರೈಲ್ವೇ ನಿಲ್ದಾಣದಲ್ಲಿಯೇ ಹೂವಿನ ಹಾರ ಹಾಕಿ ಸ್ವಾಗತಿಸುವ ಮೂಲಕ ಗ್ರಾಮಸ್ಥರು ಬರಮಾಡಿಕೊಂಡರು. ಸಿನೆಮಾ ನಟರು, ರಾಜಕಾರಣಿಗಳಿಗೆ ಸಿಗುವಂತಹ ಅದ್ಧೂರಿ ಸ್ವಾಗತ ತಮ್ಮ ಊರಿನಲ್ಲಿ ಸಿಕ್ಕಿದ್ದನ್ನ ಕಂಡು ನಿವೃತ್ತ ಯೋಧ ಬಾಲಕೃಷ್ಣ ಸಂತಸ ವ್ಯಕ್ತಪಡಿಸಿದ್ದಾರೆ.