News Kannada
Saturday, December 02 2023
ಉತ್ತರಕನ್ನಡ

ಗೋಕರ್ಣ: ಸೃಷ್ಟಿಯ ಬದಲು ದೃಷ್ಟಿ ಬದಲಿಸಿಕೊಳ್ಳಿ- ರಾಘವೇಶ್ವರ ಶ್ರೀ

Gokarna: Siddheshwara Sri Jnanaloka Mahachetana - Raghaveshwara Sri
Photo Credit : By Author

ಗೋಕರ್ಣ: ಸೃಷ್ಟಿಯ ಬದಲು ದೃಷ್ಟಿಯನ್ನು ಬದಲಾಯಿಸಿಕೊಳ್ಳುವ ಪ್ರಯತ್ನ ಮಾಡೊಣ. ಶುಭದೃಷ್ಟಿ ನಮ್ಮೆಲ್ಲರ ಬದುಕನ್ನು ಸುಖಮಯಗೊಳಿಸುತ್ತದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು.

ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಸೋಮವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ನಮ್ಮ ಮೂಗಿನ ನೇರಕ್ಕೆ ಸೃಷ್ಟಿಯನ್ನು ಬದಲಾಯಿಸುವುದು ಸಾಧ್ಯವಿಲ್ಲ. ಅದರ ಬದಲಾಗಿ ಸೃಷ್ಟಿಯನ್ನು, ಅದರ ಒಳಿತು ಕೆಡುಕುಗಳನ್ನು ನೋಡುವ ದೃಷ್ಟಿ ಬದಲಾಯಿಸಿಕೊಳ್ಳೋಣ ಎಂದು ಸಲಹೆ ಮಾಡಿದರು.

ಎಂಥ ಕಷ್ಟದಲ್ಲೂ ಇಷ್ಟವನ್ನು ಕಾಣುವ ದೃಷ್ಟಿ ನಮಗೆ ಬರಲಿ; ಪ್ರತಿಯೊಂದರಲ್ಲೂ ಉತ್ತಮ ಅಂಶಗಳಿರುತ್ತವೆ. ಅದನ್ನು ಗುರುತಿಸುವ ದೃಷ್ಟಿ ನಮ್ಮದಾಗಬೇಕು ಎಂದು ಅಭಿಪ್ರಾಯಪಟ್ಟರು.

ಗುರುಗಳೊಬ್ಬರು ವಿದ್ಯಾರ್ಥಿಗಳಿಗೆ ದಿಢೀರ್ ಪರೀಕ್ಷೆ ನಡೆಸುತ್ತಾರೆ. ಖಾಲಿ ಬಿಳಿ ಹಾಳೆಯನ್ನು ನೀಡುತ್ತಾರೆ. ನಡುವೆ ಒಂದು ಕಪ್ಪು ಚುಕ್ಕೆ ಇತ್ತು. ವಿದ್ಯಾರ್ಥಿಗಳಿಗೆ ಏನೆಂದು ಅರ್ಥವಾಗಲಿಲ್ಲ. ನಿಮಗೆ ಏನನ್ನಿಸುತ್ತದೆಯೋ ಅದನ್ನು ಬರೆಯಿರಿ ಎಂದು ಗುರುಗಳು ಹೇಳುತ್ತಾರೆ. ಎಲ್ಲ ಉತ್ತರಗಳೂ ಬಹುತೇಕ ಒಂದೇ ರೀತಿ ಇದ್ದವು. ಕಪ್ಪು ಚುಕ್ಕೆ ವರ್ಣನೆ ಮಾಡಿಯೇ ಎಲ್ಲರ ಉತ್ತರಗಳಿದ್ದರು. ಇದು ಮಾಮೂಲಿ ಪರೀಕ್ಷೆಯಲ್ಲ; ಜೀವನ ಸಿದ್ಧತೆಯ ಪರೀಕ್ಷೆ. ನೀವು ನೋಡಿದ್ದು ಕೇವಲ ಕಪ್ಪುಚುಕ್ಕೆಯನ್ನು. ಅದರ ಸುತ್ತ ಇರುವ ಬಿಳಿಭಾಗವನ್ನು ಗಮನಿಸಿದ್ದೀರಾ ಎಂದು ಗುರುಗಳು ಪ್ರಶ್ನಿಸುತ್ತಾರೆ ಎಂದು ವಿವರಿಸಿದರು.

ಜೀವನ ಕೂಡಾ ದೇವರು ಮಾಡುವ ಪುಟ್ಟ ಪರೀಕ್ಷೆ. ಅಲ್ಲಿ ಒಳ್ಳೆಯದ್ದು ಸಾಕಷ್ಟಿರುತ್ತದೆ. ಆದರೆ ಅದನ್ನು ನೋಡುವ ಬದಲು ನಾವು ಬೇರೆಯದನ್ನೇ ನೋಡುತ್ತೇವೆ. ಶುಭದೃಷ್ಟಿ ನಮ್ಮದಲ್ಲ; ಕೆಟ್ಟದ್ದನ್ನೇ ನೋಡುತ್ತೇವೆ. ಶರೀರದ ಒಂದು ಅಂಗಕ್ಕೆ ನೋವಾದರೆ ನಮ್ಮ ಗಮನ ಅದರ ಬಗ್ಗೆ ಇರುತ್ತದೆಯೇ ವಿನಃ ದೇಹದ ಇತರ ಭಾಗಗಳಿರುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಮನುಷ್ಯ ಜನ್ಮ ದುರ್ಲಭ. 84 ಕೋಟಿ ಜೀವಪ್ರಬೇಧವನ್ನು ದಾಟಿ ಮನುಷ್ಯನಾಗಿ ಹುಟ್ಟುತ್ತಾನೆ ಎಂಬ ಉಲ್ಲೇಖ ಉಪನಿಷತ್‍ಗಳಲ್ಲಿದೆ. ಆದ್ದರಿಂದ ಮನುಷ್ಯ ಜನ್ಮದಲ್ಲಿ ಒಳ್ಳೆಯದನ್ನು ಗುರುತಿಸುವ ಮೂಲಕ ಸಾರ್ಥಕಪಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು. ಯಾವ ಸಮಸ್ಯೆಯೂ ಇಲ್ಲದ ಜೀವಕೋಟಿ ಈ ಸೃಷ್ಟಿಯಲ್ಲಿ ಸಿಗುವುದಿಲ್ಲ. ಆದರೆ ಕ್ಲೇಶ ಮಾತ್ರ ಇರುವುದಲ್ಲ. ಉಳಿದ ಎಲ್ಲ ಅಂಶಗಳೂ ಒಳ್ಳೆಯದಾಗಿಯೇ ಇರುತ್ತವೆ. ಇದನ್ನು ನಾವು ಗುರುತಿಸುವುದಿಲ್ಲ ಎಂದು ಬಣ್ಣಿಸಿದರು.
ಮಹಾಭಾರತದಲ್ಲಿ ಧರ್ಮರಾಯ ಮತ್ತು ಧುರ್ಯೋದನನ ಪಾತ್ರಗಳನ್ನು ತೆಗೆದುಕೊಂಡರೆ ಧುರ್ಯೋದನನಿಗೆ ಯಾವ ಒಳ್ಳೆಯ ಅಂಶವೂ ಕಾಣಿಸುವುದಿಲ್ಲ. ಅಂತೆಯೇ ಧರ್ಮರಾಯನಿಗೆ ಯಾರೂ ಕೆಟ್ಟವರು ಕಾಣಿಸುವುದಿಲ್ಲ ಎಂದರು.

ನಮ್ಮ ಜೀವನದಲ್ಲಿ ಘಟಿಸುವ ಪ್ರತಿಯೊಂದೂ ಒಳ್ಳೆಯದಕ್ಕೇ ಘಟಿಸಿರುತ್ತದೆ. ಜೀವನದಲ್ಲಿ ಕೆಟ್ಟದು ಎನ್ನುವುದು ಯಾವುದೂ ಇರುವುದಿಲ್ಲ. ಪ್ರತಿಯೊಂದರಲ್ಲೂ ಒಳ್ಳೆಯ ಅಂಶಗಳಿರುತ್ತವೆ. ಅದನ್ನು ಗುರುತಿಸುವ ದೃಷ್ಟಿ ನಮ್ಮದಾಗಿರಬೇಕು ಎಂದು ನುಡಿದರು.

ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎಸ್.ಸಚ್ಚಿದಾನಂದಮೂರ್ತಿ ಸೋಮವಾರ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಚಾತುರ್ಮಾಸ್ಯ ಅಂಗವಾಗಿ ಸೋಮವಾರ ಐದು ದಿನಗಳ ಸಹಸ್ರಚಂಡಿಯಾಗ ಆರಂಭವಾಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಂಡಿತ್ ವೆಂಕಟೇಶ ಕುಮಾರ್ ಅವರು ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

See also  ಶಿರಸಿಯಲ್ಲಿ ಅಪ್ರಾಪ್ತ ಬಾಲಕಿಯ ಅಪಹರಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು