ಕಾರವಾರ: ಕಳೆದ 2017 ರಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ತನ್ನ ಮೇಲೆ ದಾಖಲಾಗಿದ್ದ ಪ್ರಕರಣವು ಸಾಕ್ಷಾಧಾರಗಳಿಲ್ಲದ ಕಾರಣ ನ್ಯಾಯಾಲಯವು ಖುಲಾಸೆಗೊಳಿಸಿದ್ದು ಈ ಘಟನೆಗೆ ಸಂಬಂಧಿಸಿದಂತೆ ಮೂವರ ವಿರುದ್ಧ ಒಟ್ಟೂ ಒಂದೂವರೆ ಕೋಟಿ ರೂ. ಮಾನನಷ್ಟ ಮೊಕ್ಕದ್ದಮೆ ಹೂಡುವುದಾಗಿ ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಾಘು ನಾಯ್ಕ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಳೆದ 2017ರಆಗಸ್ಟ್ 13 ರಂದು ನಗರಸಭೆ ಸದಸ್ಯ ರತ್ನಾಕರ ನಾಯ್ಕ ಅವರು ನಗರದ ಮಾಲಾದೇವಿ ಮೈದಾನದಲ್ಲಿ ಕ್ಷುಲ್ಲಕ ಕಾರಣಕ್ಕೆ ನನ್ನೊಂದಿಗೆ ಜಗಳ ತೆಗೆದು ಮಾತಿಗೆ ಮಾತಾಗಿತ್ತು. ಆದರೆ ಆ ವೇಳೆ ನಾನು ಯಾವುದೇ ರೀತಿ ಹಲ್ಲೆ ನಡೆಸದಿದ್ದರೂ ತನ್ನನ್ನು ದೂಡಿ ಕೆಳಗೆ ಕೆಡವಿ ಗಾಯಗೊಳಿಸಿದ ಬಗ್ಗೆ ಹಾಗೂ ನಾನು ಚೂರಿಯಿಂದ ಇರಿಯಲು ಬಂದಿರುವುದಾಗಿ ಸುಳ್ಳು ಹೇಳಿ ರಕ್ಷಿಸಿದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿದ್ದರು. ಬಳಿಕ ಅಂದು ಮಧ್ಯರಾತ್ರಿ ಪೊಲೀಸರು ನಮ್ಮ ಮನೆಗೆ ನುಗ್ಗಿ ಬಂಧಿಸಿ ಕಾರವಾರ ನಗರ ಠಾಣೆಯ ಲಾಕಪ್ ನಲ್ಲಿ ಹಾಕಿದ್ದರು.
ಈ ಸಂದರ್ಭದಲ್ಲಿ ಸಂಬಂಧವೇ ಇಲ್ಲದ ಪೊಲೀಸ್ ಅಧಿಕಾರಿ ಶರಣ ಗೌಡ ಮನೆಗೆ ಬಂದು ಬಾಗಿಲನ್ನು ಒದ್ದು ಠಾಣೆಗೆ ಎಳೆ ತಂದಿದ್ದರು. ಅಲ್ಲದೇ ಲಾಕಪ್ ನಲ್ಲಿದ್ದ ನನ್ನ ಫೋಟೊ ವೈರಲ್ ಮಾಡಿದ್ದರು. ಬಳಿಕ ನ್ಯಾಯಾಂಗ ಬಂಧನ ವಿಧಿಸಿ 18 ದಿನಗಳ ಬಳಿಕ ಬಿಡುಗಡೆಯಾಗಿದ್ದೆ ಎಂದು ಹೇಳಿದರು. ಇದೀಗ ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆದು ದೂರು ನೀಡಿದ ನಗರಸಭಾ ಸದಸ್ಯರು ಸೂಕ್ತ ಸಾಕ್ಷಿಗಳನ್ನು ಸಲ್ಲಿಸಲಾಗದ ಕಾರಣ ಹಾಗೂ ಸುಳ್ಳು ಮಾಹಿತಿ ನೀಡಿದ ಕಾರಣ ಆರೋಪ ಸಾಬೀತಾಗದೆ ಖುಲಾಸೆಗೊಳಿಸಲಾಗಿದೆ ಎಂದರು. ನಮ್ಮ ಮನೆಗೆ ಬಂಧಿಸಲು ಬಂದು ಬಳಿಕ ಫೊಟೊ ವೈರಲ್ ಮಾಡಿದ ಸಿ.ಪಿ.ಐ. ಶರಣಗೌಡ ಪಾಟೀಲ್ ಹಾಗೂ ದೂರು ನೀಡಿದ ರತ್ನಾಕರ ನಾಯ್ಕ ಅವರ ವಿರುದ್ಧ ತಲಾ 50 ಲಕ್ಷ ರೂ. ಗಳ ಮಾನನಷ್ಟ ಮೊಕ್ಕದ್ದಮೆ ದಾಖಲಿಸುತ್ತೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀಪಾದ ನಾಯ್ಕ, ಚರಣ ನಾಯ್ಕ, ಶಬ್ಬೀರ ಶೇಖ್, ಪ್ರಣವ್ ನಾಯ್ಕ, ಶುಭಂ ಆಚಾರಿ, ರೋಹನ ನಾಯ್ಕಮುಂತಾದವರು ಇದ್ದರು.