ಕಾರವಾರ: ಜನನ ನೋಂದಣಿ ಸಮಯದಲ್ಲಿ ನೋಂದಣಿಗೆ ಸಂಬಂಧಿಸಿದ ನೋಂದಣಾಧಿಕಾರಿಗಳು ಸಂಪೂರ್ಣ ಜವಾಬ್ದಾರಿಯಿಂದ ಹೆಸರುಗಳು, ವಿಳಾಸಗಳು ತಪ್ಪಾಗದ ರೀತಿಯಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು ಜನನ, ಮರಣ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ಡಿಜಿಟಲ್ ಸಹಿಯೊಂದಿಗೆ ವಿತರಿಸುವ ಕಾರ್ಯವಾಗಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ. ಪಿ. ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿ ಅಧಿಕಾರಿಗಳ ಜಿಲ್ಲಾ ಮಟ್ಟದ ಜನನ ಮರಣ ನೋಂದಣಿ ಸಮನ್ವಯ ಸಮಿತಿ ಸಭೆ ಹಾಗೂ ಕೃಷಿ ಅಂಕಿ ಅಂಶಗಳ ಸಮನ್ವಯ ಸಮಿತಿಯ ಸಭೆಯ ವಿಡಿಯೋ ಸಂವಾದದ ಅಧ್ಯಕ್ಷತೆ ವಹಿಸಿ ಜಿಲ್ಲೆಯ ಎಲ್ಲ ತಾಲೂಕುಗಳ ತಹಶೀಲ್ದಾರರನ್ನು ಉದ್ದೇಶಿಸಿ ಅವರು ಮಾತನಾಡಿದರು. ೨೦೨೦ನೇ ವರ್ಷಕ್ಕಿಂತ ಹಿಂದಿನ ಅವಧಿಯ ಜನನ ಮರಣ ದಾಖಲೆಗಳನ್ನು ಸಂರಕ್ಷಣಾಧಿಕಾರಿಗಳಿಗೆ ವರ್ಗಾಯಿಸುವ ವಿಷಯದಲ್ಲಿ ಇನ್ನೂವರೆಗೆ ಮಾಹಿತಿ ಒದಗಿಸದ ತಹಶೀಲ್ದಾರ ಕಚೇರಿ ಅಧಿಕಾರಿಗಳಿಗೆ ಟೈಮ್‌ಲೈನ್ ಹಾಗೂ ನಮೂನೆ ಸಿದ್ಧಪಡಿಸಿ ಮಾಹಿತಿ ನೀಡಲು ತಿಳಿಸಬೇಕು. ಜನನ ಮರಣ ನೋಂದಣಿ ಅಧಿಕಾರಿಗಳೇ ನೋಂದಣಿ ನಂತರದ ಆಗು ಹೋಗುಗಳಿಗೆ ಜವಾಬ್ದಾರರಾಗಿರುವುದರಿಂದ ತಪ್ಪುಗಳು, ವ್ಯತ್ಯಾಸಗಳು ಬಾರದಂತೆ ಜಾಗರೂಕತೆ ವಹಿಸಬೇಕು ಎಂದು ಹೇಳಿದರು.
ಜನನ ಮರಣ ನೋಂದಣಿ ಕುರಿತು ಯಾವುದೇ ರೀತಿಯ ತಿದ್ದುಪಡಿಯಾಗಬೇಕಿದ್ದಲ್ಲಿ ನಿಯಮಾನುಸಾರ ದಾಖಲೆಗಳ ಸತ್ಯಾಸತ್ಯತೆ ಪರಿಶೀಲಿಸಿ ತಿದ್ದುಪಡಿಗೆ ಅವಕಾಶ ನೀಡಲಾಗುತ್ತದೆ. ಇ-ಜನ್ಮ ತಂತ್ರಾಂಶದ ಇತ್ತೀಚಿನ ಬದಲಾವಣೆಗಳ ಕುರಿತು ತಿಳಿಸಬೇಕು. ೯೦ ದಿನಗಳ ನಂತರದಲ್ಲಿ ತಿದ್ದುಪಡಿ ಮಾಡಬೇಕಿದ್ದಲ್ಲಿ ಜಿಲ್ಲಾ ಸಂಗ್ರಹಣಾಧಿಕಾರಿಗಳ ಮೂಲಕ ಮುಖ್ಯ ನೋಂದಣಿ ಅಧಿಕಾರಿಗೆ ಅರ್ಜಿ ಸಲ್ಲಿಸಬೇಕು. ಈ ಕುರಿತಂತೆ ಹೆಚ್ಚಿನ ಅರಿವು ಮೂಡಿಸಲು ಅಧಿಕಾರಿಗಳಿಗೆ ಆನ್‌ಲೈನ್ ತರಬೇತಿ ಆಯೋಜಿಸಬೇಕು ಪಿಪಿಟಿ ಮೂಲಕ ವಿಷಯ ಮನದಟ್ಟು ಮಾಡಿಸಿ ನೋಂದಣ ಕಾರ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸುವಂತೆ ಮಾಡಬೇಕು ಎಂದು ನಿರ್ದೇಶನ ನೀಡಿದರು. ಜನನ ಮರಣ ನೋಂದಣಿ ಘಟಕಗಳಲ್ಲಿ ತಪ್ಪುಗಳು ಆಗದಂತೆ ಎಚ್ಚರ ವಹಿಸಬೇಕು. ಆಸ್ಪತ್ರೆಯವರು ನೋಂದಣಿದಾರರಿಗೆ ಮಾಹಿತಿ ನೀಡುವಾಗ ಖಚಿತವಾದ ಸತ್ಯಾಂಶದಿAದ ಕೂಡಿದ ಮಾಹಿತಿ ನೀಡಬೇಕು. ಎಲ್ಲ ಹಂತದ ನೋಂದಣಿ ಕಾರ್ಯಾಲಯದಲ್ಲಿ ನಮೂನೆಗಳನ್ನು ವ್ಯವಸ್ಥಿತವಾಗಿ ಅನುಕ್ರಮವಾಗಿ ಇಡಬೇಕು. ನಿಗದಿತ ಸಮಯದಲ್ಲಿ ನೋಂದಣಿ ಆಗದೇ ಇರುವ ಘಟನೆಗಳಿಗೆ ವಿಳಂಬ ನೋಂದಣಿ ಮಾಡುವ ಸಂದರ್ಭದಲ್ಲಿ ಸಂರಕ್ಷಣಾಧಿಕಾರಿಗಳ ಆದೇಶ ಕಡ್ಡಾಯವಾಗಿ ಬೇಕೆ ಬೇಕು ಎಂದು ತಿಳಿಸಿದರು.
ಜನನ ನೋಂದಣಿ ಸಮಯದಲ್ಲಿ ತಾಯಿಕಾರ್ಡ ಅವಶ್ಯಕವಾಗಿರುವುದರಿಂದ ತಾಯಿ ಕಾರ್ಡನ್ನು ಸುವ್ಯವಸ್ಥಿತವಾಗಿ ನೀಡುವ ಕಾರ್ಯವಾಗಬೇಕು. ಜಿಲ್ಲೆಯಲ್ಲಿ ಹೋಮ್ ಡೆಲಿವರಿ ಸಂಭವಿಸಿದ ಘಟನೆಗಳು ಮತ್ತು ದತ್ತು ಮಗು ಕೊಡುವ ವಿಚಾರದಲ್ಲಿ ಸತ್ಯಾಂಶವಿರುವ ಮಾಹಿತಿ ನೀಡಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಮರಣ ಸಂಭವಿಸಿದಾಗ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿಗೆ ಮಾಹಿತಿ ನೀಡದ ಸಂಸ್ಥೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಕೃಷಿ ಅಂಕಿ ಅಂಶಗಳ ಕುರಿತು ಚರ್ಚಿಸಲಾಗಿ ಬೆಳೆ ಸಮೀಕ್ಷೆಯಿಂದ ಖಚಿತ ಮಾಹಿತಿ ಸಿಗುವುದರಿಂದ ಸಮೀಕ್ಷೆಯನ್ನು ಋತುವಾರು ಕೈಗೋಳ್ಳಬೇಕು. ಬೆಳೆ ಪ್ರಯೋಗದಲ್ಲಿ ಬೆಳೆ ಲ್ಯಾಪ್ಸ್ ಆದ ಬಗ್ಗೆ ನಿಗಾ ಇಡಬೇಕು. ತಹಶೀಲ್ದಾರ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಪ್ರತಿ ತಿಂಗಳು ಪ್ರಗತಿ ಪರಿಶೀಲನೆ ಸಭೆ ಮಾಡಬೇಕು. ನಡೆದ ಘಟನಾವಳಿಯ ಕುರಿತು ಮಾಹಿತಿ ಒದಗಿಸಬೇಕು. ತಹಶೀಲ್ದಾರ ಮತ್ತು ಎಸಿಯವರು ಬೆಳೆ ಕಟಾವುಕುರಿತಂತೆ, ಬೆಳೆ ಕಡಿಮೆಯಾದ ಕುರಿತು, ವ್ಯತ್ಯಾಸ ಹೇಗಾಯಿತು ಎಂಬುದರ ಕುರಿತು ಮತ್ತು ಸುಪರ್‌ವೈಸ್ ಮಾಡುವ ಅಧಿಕಾರಿಗಳ ಕಾರ್ಯ ವೈಖರಿಯ ಬಗ್ಗೆ ಮುಂದಿನ ಸಭೆಯಲ್ಲಿ ಮಾಹಿತಿ ನೀಡಬೇಕು ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಶರದ ನಾಯಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಸೀಮಾ ತಳೇಕರ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸೋಮಶೇಖರ ಮೇಸ್ತ, ಡಿಯುಡಿಸಿ ಆರ್.ವಿ. ಕಟ್ಟಿ, ಗ್ರೇಡ್ ೨ ತಹಶೀಲ್ದಾರ ಶ್ರೀದೇವಿ ಭಟ್, ನಿತಿನ್ ಶಿಂಧೆ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.