ಕಾರವಾರ: ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸ್ತ್ರೀ ಶಕ್ತಿ ಸಭಾಭವನದಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್. ಪ್ರಮೀಳಾ ನಾಯ್ಡು ಅವರು ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಹಾಗೂ ವಿವಿಧ ಸಂಘಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ತಡೆಗೆ ಕೈಗೊಂಡಿರುವ ಕ್ರಮ ಹಾಗೂ ನಡೆದಿರುವ ಪೋಕ್ಸೋ ಪ್ರಕರಣಗಳ ಬಗ್ಗೆ ಮಾಹಿತಿಯನ್ನು ಅವರು ಪಡೆದುಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸರಕಾರದ ವಿವಿಧ ಯೋಜನೆಗಳನ್ನು ಮಹಿಳೆಯರಿಗೆ ತಲುಪಿಸುವ ಕಾರ್ಯ ಅಧಿಕಾರಿಗಳೇ ಮಾಡಬೇಕಾಗಿದ್ದರಿಂದ ಸೂಕ್ತ, ಅರ್ಹರಿಗೆ ಯೋಜನೆಯ ಮಾಹಿತಿ, ಅದರ ಲಾಭ ಲಭ್ಯವಾಗುವಂತೆ ಮಾಡಬೇಕು. ಮಹಿಳೆ ಸ್ವಾವಲಂಬನೆ ಯಿಂದ ಬದುಕುವ ರೀತಿಯಲ್ಲಿ, ಅಹಾಯಕರಾಗಿರುವ ಮಹಿಳೆಗೆ ಸಹಕರಿಸುವ ಕಾರ್ಯ ಆಗಬೇಕಾಗಿದೆ ಎಂದರು.
ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಆತ್ಮಸ್ಥೈರ್ಯ ಹೆಚ್ಚಿಸುವ ಬಗ್ಗೆ ಕ್ರಮಕೈಗೊಳ್ಳಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬಾಲ್ಯದಲ್ಲಿ ಹೆಣ್ಣು ಮಕ್ಕಳಿಗೆ ಆತ್ಮಸ್ಥೈರ್ಯದ ಕೊರತೆ ಸಾಧ್ಯತೆ ಇದೆ. ಹಲವು ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವಂಥ ಸ್ಥಿತಿಗಳು ಎದುರಾಗುತ್ತದೆ. ಇಂಥ ಪ್ರಕರಣಗಳು ನಡೆಯಬಾರದು. ಹೆಣ್ಣು ಮಕ್ಕಳಲ್ಲಿ ಧೈರ್ಯ ಹೆಚ್ಚಿಸುವ ಕಾರ್ಣದಿಂದ ಮಹಿಳಾ ಸಾಧಕಿಯರಿಂದ ಉಪನ್ಯಾಸ ನೀಡುವ ಕ್ರಮಕೈಗೊಳ್ಳಲಾಗುವುದು ಎಂದರು.
ಅಂಗನವಾಡಿ ಕಾರ್ಯಕರ್ತೆಯರು ತಳಮಟ್ಟದಲ್ಲಿ ಕಾರ್ಯ ನಿರ್ವಹಿಸುವುದರಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಎಲ್ಲ ಸವಲತ್ತಗಳನ್ನು ಮಹಿಳೆ ಹಾಗೂ ಮಕ್ಕಳಿಗೆ ತಲುಪಿಸುವ ಜವಾಬ್ದಾರಿ ಇದೆ. ಸಂತ್ರಸ್ಥರಾಗಿರುವ ಮಹಿಳೆಯರು ಅಥವಾ ಪೋಕ್ಸೋ ಕಾಯಿದೆಯಡಿ ಸಖಿ ಹಾಗೂ ಸಾಂತ್ವಾನ ಕೇಂದ್ರಗಳಲ್ಲಿರು ಹೆಣ್ಣುಮಕ್ಕಳ ಮರು ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕು. ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ಮಾತ್ರ ಸ್ವಾಲಂಭನೆಯ ಬದುಕು ಕಲ್ಪಿಸಲು ಸಾಧ್ಯ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಈ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಕೌಟುಂಬಿಕ ಕಲಹಗಳಿಂದ ಹೆಣ್ಣಿನ ಶಿಕ್ಷಣಕ್ಕೆ ಕೊರತೆಯಾಗಬಾರದು. ಅವರಿಗೆ ಸಂಪೂರ್ಣ ಭದ್ರತೆ ಒದಗಿಸುವುದೇ ನಮ್ಮ ಉದ್ದೇಶ. ಒಟ್ಟಿನಲ್ಲಿ ಸಾಂತ್ವಾನ ಕೇಂದ್ರಗಳಲ್ಲಿ ಧನಾತ್ಮಕ ವಾತಾವರಣವನ್ನು ಸೃಷ್ಠಿಸಬೇಕು. ಈ ನಿಟ್ಟಿನಲ್ಲಿ ಎನ್‌ಜಿಒ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಕ್ರಿಯಾಶೀಲರಾಗಬೇಕು ಎಂದರು. ಬಾಲ್ಯ ವಿವಾಹ, ಪೋಕ್ಸೋ ಪ್ರಕರಣಗಳು ಹಾಗೂ ಕಿರುಕುಳ ಪ್ರಕರಣಗಳಲ್ಲಿ ಅಫರಾದಿಗೆ ನೀಡುವ ಶಿಕ್ಷೆಯ ಆದ ಬಗ್ಗೆ ಪ್ರಚಾರ ನೀಡಿ. ಇದರಿಂದ ಜನರು ಎಚ್ಚೆತ್ತುಕೊಳ್ಳುತ್ತಾರೆ ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿದೇರ್ಶಕಿ ಶ್ಯಾಮಲಾ, ಕಾರ್ಮಿಕ ಇಲಾಖೆಯ ಅಧಿಕಾರಿ ಅಕ್ಬರ ಮುಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.