ಕಾರವಾರ: ಅನಾಥ ಶವಗಳಿಗೆ ಮುಕ್ತಿ ನೀಡುವ ಇಲ್ಲಿನ ಕೋಡಿಬಾಗದ ದೇವಿದಾಸ ಕಲಗುಟ್ಕರ ಅವರ ಗುಡಿಸಲಿನ ಮೇಲೆ ಜೆಸಿಬಿ ಮೂಲಕ ಪ್ರಹಾರ ನಡೆಸಲಾಗಿದೆ. ಗುಡಿಸಲಿನಲ್ಲಿ ಅಡುಗೆ ಮಾಡುವ ತಯಾರಿಯಲ್ಲಿದ್ದಾಗಲೇ ಜೆಸಿಬಿಯೊಂದಿಗೆ ಬಂದ ಖಾಸಗಿ ವ್ಯಕ್ತಿಗಳು, ಶವ ಸುಡಲು ಸಂಗ್ರಹಿಸಿಟ್ಟುಕೊಂಡಿದ್ದ ಕಟ್ಟಿಗೆಯನ್ನೂ ಹಳ್ಳಕ್ಕೆ ಎಸೆದಿದ್ದಾರೆ. ಮನೆ ಕಟ್ಟುವ ಕಲ್ಲುಗಳನ್ನೂ ನಷ್ಟ ಮಾಡಿದ್ದಾರೆ. ಗುಡಿಸಲಿನ ಛಾವಣಿಗೂ ಹಾನಿ ಮಾಡಿದ್ದಾರೆ.
ಲಕ್ಷಾಂತರ ರೂ. ನಷ್ಟ ಆಗಿದೆ. ೧೫ ವರ್ಷಗಳಿಂದ ಇದೇ ಸ್ಥಳದಲ್ಲಿ ವಾಸವಿದ್ದೆ. ದೇವಿದಾಸ ಅವರು ಸಮುದ್ರ, ಹಳ್ಳದಲ್ಲಿ ಸಿಗುವ ಶವಗಳನ್ನು ಎತ್ತಲು, ಅಪರಿಚಿತ ಶವಗಳ ಸಂಸ್ಕಾರ ಮಾಡಲು ಪೊಲೀಸ್ ಇಲಾಖೆಗೆ ನೆರವಾಗುತ್ತಿದ್ದಾರೆ. ಇತ್ತಿಚೇಗೆ ವಿವಿಧ ಸಂಘಟನೆಗಳು ಅವರನ್ನು ಸನ್ಮಾನಿಸಿ ಗೌರವಿಸಿತ್ತು. ಈಗ ನಗರಸಭೆ ಮಾಜಿ ಸದಸ್ಯ ರಂಜು ಮಾಳ್ಸೇಕರ ಅವರೇ ತಮ್ಮ ಗುಡಿಸಲು, ಆಸ್ತಿ ಹಾನಿ ಮಾಡಿದ್ದಾರೆ ಎಂದು ದೇವಿದಾಸ ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಂಜು ಮಾಳ್ಸೇಕರ್, ಜೆಸಿಬಿಯೊಂದಿಗೆ ಹೋಗಿದ್ದು ನಿಜ. ಆದರೆ, ಗುಡಿಸಲು ಕೆಡವಿಲ್ಲ. ಅವ ಗುಡಿಸಲು ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿದೆ. ಆ ಗುಡಿಸಲಿನಲ್ಲಿ ಮದ್ಯ ಮಾರಾಟವೂ ಮಾಡುತ್ತಾರೆ. ನಾವು ಅದರ ಪಕ್ಕದ ನಮ್ಮ ಜಾಗ ಸರಿ ಮಾಡಿಕೊಂಡಿದ್ದೇವೆ ಎಂದು ಪ್ರತಿಕ್ರಿಯಿಸಿದರು. ಗುಡಿಸಲು ಇರುವ ಸಮೀಪದ ಜಾಗದ ಮಾಲೀಕರಿಂದ ೧೦ ವರ್ಷಗಳಿಂದಲೂ ಅಗ್ರಿಮೆಂಟ್ ಮಾಡಿಕೊಂಡಿದ್ದೇನೆ. ಮಾಲೀಕರು, ನಾವು ಸೇರಿ ಜಾಗ ಸರಿಮಾಡಿ ಬೇಲಿ ಹಾಕಿಕೊಂಡಿದ್ದೇವೆ ಎಂದು ರಂಜು ಮಾಳ್ಸೇಕರ್ ತಿಳಿಸಿದರು.