ಕಾರವಾರ: ಯಾಣದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಿಕ್ಕ ಅಪರಿಚಿತ ಶವದ ಪ್ರಕರಣ ಕೊಲೆ ಎನ್ನುವ ಶಂಕೆ ತಮಗಿದ್ದು ಇದಕ್ಕೆ ಸಂಬಂಧಿಸಿದಂತೆ ಶಂಕರ ಮಾರಾಠಿ ಅವರ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಹೋದರೂ ಪೊಲೀಸರು ದೂರು ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಯಾಣದ ಶಿವರಾಮ ದೇವು ಗೌಡ ಆರೋಪಿಸಿದ್ದಾರೆ.
ಕಾರವಾರದ ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಪಕ್ಕದ ಮೆನೆಯವರಾದ ಶಂಕರ ಮಾರಾಠಿ ಹಾಗೂ ಇನ್ನಿತರ 4 ಜನರು ನನ್ನ 5 ಸಾಕು ನಾಯಿಗಳನ್ನು ವಿಷ ಹಾಕಿ ಕೊಂದಿದ್ದರು.
ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ಆದರೆ ಆರೋಪಿತರ ವಿರುದ್ಧ ಈವರೆಗೆ ಎಫ್ಐಆರ್ ಮಾಡಲಿಲ್ಲ.ಬಳಿಕ ಯಾಣದಲ್ಲಿ ನೇಣು ಬಿಗಿದ ರೀತಿಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿತ್ತು.ಆತನ ಮೃತದೇಹ ಸಿಗುವ ಮುನ್ನ ಕೆಲವೊಬ್ಬರು ಆತ ಶಂಕರ ಮರಾಠಿ ಅವರ ಮನೆಗೆ ಬರುತ್ತಿದ್ದದ್ದನ್ನು ನಾನು ನೋಡಿದ್ದೇನೆ.
ಈ ಆಧಾರದ ಮೇಲೆ ಶಂಕೆ ವ್ಯಕ್ತವಾಗಿ ಅವರ ವಿರುದ್ಧ ದೂರು ದಾಖಲಿಸಲು ಹೋದರೆ ಪೊಲೀಸರು ಪ್ರಕರಣ ತೆಗೆದುಕೊಳ್ಳಲು ನಿರಾಕರಿಸುತ್ತಿದ್ದಾರೆ. ಶಂಕರ ಮಾರಾಠಿ ಅವರು ಪ್ರಭಾವಿ ರಾಜಕಾರಣಿಗಳ ಜೊತೆ ಗುರುತಿಸಿಕೊಂಡಿರುವುದರಿಂದ ಇದರ ಹಿಂದೆ ರಾಜಕೀಯ ಕೈವಾಡ ಇದೆ ಎನ್ನುವ ಶಂಕೆ ಇದೆ ಎಂದು ಆರೋಪಿಸಿದ್ದಾರೆ. ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳದಿರುವ ಬಗ್ಗೆ ಈ ಹಿಂದೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಮನವಿ ನೀಡಿದ್ದರೂ ಯವುದೇ ಪ್ರಯೋಜನವಾಗಲಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕುಮಟಾದ ನಾಗರಾಜ್ ಶೇಟ್ ಇದ್ದರು.