ಕಾರವಾರ: ಸೆ.17ರಿಂದ ಅ.2ರವರೆಗೆ ಬಿಜೆಪಿಯಿಂದ ಸೇವಾ ಪಾಕ್ಷಿಕ ಅಡಿಯಲ್ಲಿ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ ನಾಯಕ ತಿಳಿಸಿದರು.
ಕಾರವಾರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನವಾದ ಸೆ.17ರಂದು ಹಾಗೂ ಅಂದಿನಿಂದ 15 ದಿನಗಳ ಕಾಲ ಸೇವಾ ಪಾಕ್ಷಿಕ ಅಡಿಯಲ್ಲಿ ಬಿಜೆಪಿಯಿಂದ ಜಿಲ್ಲೆಯಲ್ಲಿ ವಿವಿಧ ಸೇವಾ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಸೆ.17, 18ರಂದು ಆರೋಗ್ಯ ತಪಾಸಣಾ ಶಿಬಿರ, ಕೃತಕ ಅಂಗಗಳ ಜೋಡಣೆ, ಲಸಿಕಾ ಅಭಿಯಾನ, 22ರಿಂದ 26ರವರೆಗೆ ಅಮೃತ ಸರೋವರ ಘೋಷವಾಕ್ಯದಡಿ ಕೆರೆ, ಕೊಳ, ಸರೋವರ, ನದಿ ಮತ್ತು ಉದ್ಯಾನವನಗಳ ಸ್ವಚ್ಛತೆ, ಅರಳಿ ಸಸಿ ನೆಡುವ ಹಾಗೂ ವಿತರಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
24ರಂದು ಪ್ರತಿ ಬೂತ್‌ಗಳಲ್ಲಿ ಕಮಲೋತ್ಸವದ ಅಡಿಯಲ್ಲಿ ಪಂಡಿತ್ ಧೀನದಯಾಳ್ ಉಪಾಧ್ಯಾಯ ಜನ್ಮದಿನಾಚರಣೆ, ಕೇಸರಿ ಟೋಪಿ ಧರಿಸಿ ಮನ್ ಕಿ ಬಾತ್ ವೀಕ್ಷಣೆ, ಬೂತ್ ಸಭೆ, ಪಕ್ಷದ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. 25ರಿಂದ 28ರವರೆಗೆ ಫಲಾನುಭವಿಗಳ ಸಮಾವೇಶ, 29ರಂದು ಅಂಗನವಾಡಿ ಸೇವಾ ದಿವಸ್ ಹಾಗೂ ಪತ್ರ ಬರಹ, 30ರಂದು ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ, ಅ.2ರಂದು ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಖಾದಿ ಉತ್ಸವವನ್ನು ಆಯೋಜಿಸಲಾಗುತ್ತಿದೆ.
ಅಂದು ಪ್ರತಿ ಬಿಜೆಪಿ ಕಾರ್ಯಕರ್ತ ಏನಾದರೊಂದು ಖಾದಿಯ ವಸ್ತುವನ್ನು ಕೊಂಡುಕೊಳ್ಳಲಿದ್ದಾರೆ ಹಾಗೂ ಸಾರ್ವಜನಿಕರಿಗೆ ಖಾದಿ ಖರೀದಿಸಲು ಪ್ರೇರೇಪಿಸಲಿದ್ದಾರೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಗರ ಮಂಡಲಾಧ್ಯಕ್ಷ ನಾಗೇಶ ಕುರ್ಡೇಕರ, ಬಿಜೆಪಿ ಮಹಿಳಾ ಪ್ರಮುಖರಾದ ನಯನಾ ನೀಲಾವರ್ ಇದ್ದರು.