ಕಾರವಾರ: ಜಿಲ್ಲೆಯಲ್ಲಿ ರೆಬಿಸ್ ತಡೆಯಲು ಗ್ರಾಮೀಣ ಪ್ರದೇಶಗಳಿಗೆ ಹೋಗಿ ಶಾಲಾ ಮಕ್ಕಳಿಗೆ ಇದರ ಬಗ್ಗೆ ಅರಿವು ಮೂಡಿಸಬೇಕು ಹಾಗೂ ಪ್ರಕರಣಗಳು ಕಂಡುಬಂದಲ್ಲಿ ಆರೋಗ್ಯಾಧಿಕಾರಿಗಳು ಸೂಕ್ಷ್ಮ ಕ್ರಮಕೈಗೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವಿರ್ ಅವರು ಅಧಿಕಾರಿಗಳಿಗೆ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ರೆಬಿಸ್ ಕಾಯಿಲೆಯ ಕುರಿತು ಅಂತರ್ ರಾಜ್ಯ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರವಾರ ಜಿಲ್ಲಾ ಸರ್ವೇಕ್ಷಣಾಧಿಕಾರಿ ಅರ್ಚನಾ ನಾಯಕ ಮಾತನಾಡಿ ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ ೬೫೩೩ ನಾಯಿ ಜೊತೆಗೆ ಇತರೆ ಪ್ರಾಣಿಗಳಿಂದ ೩೪೯ ಕಚ್ಚಿದ ಪ್ರಕರಣಗಳು ದಾಖಲಾಗಿದೆ. ಯಾವುದೇ ರೀತಿಯ ರೆಬಿಸ್ ಕೇಸ್‌ಗಳು ಕಂಡುಬಂದಿಲ್ಲ. ಜೊತೆಗೆ ಯಾವುದೇ ಪ್ರಾಣಿಗಳು ಕಚ್ಚಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು, ರೆಬಿಸ್ ಮಾರಣಾಂತಿಕವಾದರೂ ಭಯಪಡುವಂತಹ ರೋಗವೇನಲ್ಲ ಇದಕ್ಕೆ ಕೂಡಲೇ ಚಿಕಿತ್ಸೆ ಪಡೆದರೆ ತಡೆಗಟ್ಟಬಹುದು ಎಂದು ಹೇಳಿದರು.
ಮಿಷನ್ ರೆಬಿಸ್ ಅಡಿಯಲ್ಲಿ ಈಗಾಗಲೇ ಕಾರವಾರ ತಾಲೂಕಿನ ೬೮ ಶಾಲೆಗಳಿಗೆ ಬೇಟಿ ನೀಡಿ ಇದರ ಬಗ್ಗೆ ಮಕ್ಕಳಲಿ ಜಾಗೃತಿ ಮೂಡಿಸಲಾಗಿದ್ದು ಇನ್ನುಳಿದ ಶಾಲೆಗಳಿಗೂ ಭೇಟಿ ನೀಡಿ ಈ ಕುರಿತು ಜಾಗೃತಿ ಮೂಡಿಸುವ ಸಮಾಜಮುಖಿ ಕೆಲಸ ಮಾಡಲು ಬಯಸುವ ಶಿಕ್ಷಕರನ್ನು ನೇಮಿಸಿಕೊಳ್ಳಿ ಜೊತೆಗೆ ಸರಿಯಾದ ಯೋಜನೆ ರೂಪಿಸಿ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶರದ್ ನಾಯಕ್, ಡಾ.ಲಲಿತ ಶೆಟ್ಟಿ, ಕಾರವಾರ ಡಿಎಲ್‌ಒ ಶಂಕರ್‌ರಾವ್, ಕಾರವಾರ ಡಿ.ಡಿ.ಪಿ.ಐ ಈಶ್ವರ ನಾಯ್ಕ ಹಾಗೂ ಇನ್ನಿತರ ಅಧಿಕಾರಿ ಮತ್ತು ಸಿಬ್ಬಂದಿಗಳು ಇದ್ದರು.