ಕಾರವಾರ: ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಮರಾಠಾ ಸಮಾಜವನ್ನು ಆದಷ್ಟು ಶೀಘ್ರ 3ಬಿ ಯಿಂದ 2ಎ ಗೆ ಸೇರ್ಪಡೆಯಾಗುವ ಕೆಲಸವಾಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳ ಈ ಬಗ್ಗೆ ಹೋರಾಟ ನಡೆಸಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಮಾಜಿ ಜಿಪಂ ಸದಸ್ಯ, ಮರಾಠಾ ಮುಖಂಡ ಎಲ್. ಟಿ. ಪಾಟೀಲ್ ಎಚ್ಚರಿಸಿದ್ದಾರೆ.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ರಾಜ್ಯದ 20 ಜಿಲ್ಲೆಗಳಲ್ಲಿ ಸೇರಿ ಸುಮಾರು 50 ಲಕ್ಷದಷ್ಟು ಮರಾಠಾ ಸಮುದಾಯದ ಜನರಿದ್ದಾರೆ. ಕಳೆದ 10 ವರ್ಷಗಳಿಂದಲೂ ನಮ್ಮ ಸಮುದಾಯವನ್ನು 3ಬಿ ಯಿಂದ 2ಎ ಗೆ ಸೇರ್ಪಡಿಸುವಂತೆ ಆಗ್ರಹಿಸುತ್ತ ಬಂದಿದ್ದೇವೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ನಿರಂತರವಾಗಿ ಈ ಬಗ್ಗೆ ಹೋರಾಟ ನಡೆಸುತ್ತ ಬರಲಾಗಿದೆ. ಯಡಿಯೂರಪ್ಪ ಅವರು ತಮ್ಮ ಅಧಿಕಾರ ಬಂದ 24 ಗಂಟೆಗಳಲ್ಲಿ ಈ ಕಾರ್ಯ ಮಾಡುವುದಾಗಿ ತಿಳಿಸಿದ್ದರಾದರೂ ಅದು ಆಗಲಿಲ್ಲ. ಬಳಿಕ ಸಿಎಂ ಬೊಮ್ಮಾಯಿಯವರೂ ಆಶ್ವಾಸನೆ ನೀಡಿದ್ದರು. ಪ್ರಸ್ತಾವನೆ ರಾಜ್ಯದಿಂದ ಕೇಂದ್ರ ಸರಕಾರಕ್ಕೆ ಸಲ್ಲಿಕೆಯಾಗಿದೆ ಎಂದು ಹಿಂದುಳಿದ ವರ್ಗಗಳ ಅಧ್ಯಕ್ಷ ಜಯಪ್ರಕಾಶ ಅವರು ತಿಳಿಸಿದ್ದರು. ಹೀಗಾಗಿ ಇಲ್ಲಿಯವರೆಗೆ ಎಲ್ಲ ಮರಾಠಿಗರು ಕಾದಿದ್ದೇವೆ. ಹೀಗಾಗಿ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಮನವಿ ಸಲ್ಲಿಸಿ ಒತ್ತಾಯಿಸುತ್ತಿದ್ದೇವೆ ಎಂದರು.
ದೇಶದ ರಕ್ಷಣೆಗಾಗಿ ರಾಜ ಮಹಾರಾಜರ ಕಾಲದಿಂದ ಇಂದಿನವರೆಗೂ ಹೋರಾಟ ನಡೆಸುತ್ತಿರುವ ನಮ್ಮ ಮರಾಠಾ ಜನಾಂಗವನ್ನು 2ಎಗೆ ಸೇರಿಸಿದರೆ ತುಂಬ ಅನುಕೂಲವಾಗಲಿದೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಈ ಬಗ್ಗೆ ಗಮನ ಹರಿಸಿ ಮರಾಠಾ ಜನಾಂಗವನ್ನು ಕೂಡಲೇ 3ಬಿ ಯಿಂದ 2 ಎ ಗೆ ಸೇರ್ಪಡೆ ಮಾಡಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ವಿಧಾನ ಸೌಧದ ಎದುರು ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಉಡಚಪ್ಪಾ ಕೆ. ಬೊಬಾಟಿ, ನಾಗರಾಜ ಬೆಣ್ಣಿ, ಶ್ಯಾಮಲಾ, ಜ್ಯೋತಿ ಮುಂತಾದವರಿದ್ದರು.