ಕಾರವಾರ: ಭಯೋತ್ಪಾದಕರಿಗೆ ಬೆಂಬಲ ಕೊಡುವಂತಹ ಪಕ್ಷ ಯಾವುದಾದರೂ ಇದ್ದರೆ ಅದು ಬಿಜೆಪಿಯಾಗಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ.
ಕಾರವಾರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಉಗ್ರವಾದಿಗಳನ್ನು ಸಾಕುತ್ತಿರುವವರೆ ಬಿಜೆಪಿಗರು. ಕಾಂಗ್ರೆಸ್ಪಕ್ಷಕ್ಕೆ ಬಿಜೆಪಿಯವರು ಸರ್ಟಿಫಿಕೇಟ್ ಕೊಡಬೇಕಾದ ಅವಶ್ಯಕತೆ ಇಲ್ಲ ಎಂದರು. ಮಂಗಳೂರು ಕುಕ್ಕರ್ ಬ್ಲ್ಯಾಸ್ಟ್ ಪ್ರಕರಣದಲ್ಲಿ ಪೊಲೀಸ್ ತನಿಖೆಗೂ ಮೊದಲೇ ಭಯೋತ್ಪಾದಕ ಕೃತ್ಯ ಎಂದು ಬಿಜೆಪಿ ಮುಖಂಡರು ಹೇಳಿಕೆ ನೀಡಿದ್ದರು. ಯಾವ ತನಿಖೆ ಆಧರಿಸಿ ಬಿಜೆಪಿಯವರು ಅದನ್ನು ಭಯೋತ್ಪಾದಕ ಕೃತ್ಯ ಎಂದರು ಎಂಬುದನ್ನೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪ್ರಶ್ನೆ ಮಾಡಿದ್ದರು.
ಪೊಲೀಸ್ ನೇಮಕಾತಿ ಅಕ್ರಮ, ರಸ್ತೆ ಗುಂಡಿ, ಬೆಂಗಳೂರು ಕಾನೂನು ಅವ್ಯವಸ್ಥೆ, 40 ಪರ್ಸೆಂಟ್ ಕಮಿಷನ್ ಮತ್ತು ಮತದಾರರ ಪಟ್ಟಿ ಕಳ್ಳತನ ವಿವಾದದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಮಂಗಳೂರಿನ ಕುಕ್ಕರ್ ಬ್ಲಾಸ್ಟ್ ಪ್ರಕರಣವನ್ನು ಬಿಜೆಪಿಯು ಬಳಸಿಕೊಂಡಿದೆ ಎಂದು ಆರೋಪಿಸಿದರು. ಕುಕ್ಕರ್ ಬ್ಲಾಸ್ಟ್ ಆದ ಮಾರನೇ ದಿನವೇ ಆರೋಪಿಯನ್ನು ಉಗ್ರವಾದಿ ಎಂದರು. ಅಷ್ಟು ಬೇಗ ಯಾರು ತನಿಖೆ ಮಾಡಿದ್ದರು. ಬ್ಲಾಸ್ಟ್ ಮಾಡಿದವರಿಗೆ ಶಿಕ್ಷೆ ಆಗಬೇಕು. ಆದರೆ, ತನಿಖೆಗೂ ಮೊದಲೇ ಅದನ್ನು ಉಗ್ರರ ಕೃತ್ಯ ಎಂದು ಹೇಳಿ ಬಳಸಿಕೊಳ್ಳಲು ಯತ್ನಿಸಿದ್ದು ಸರಿಯಲ್ಲ ಎಂದು ಡಿ.ಕೆ. ಶಿವಕುಮಾರ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡರು.