ಕಾರವಾರ: ನೀರು ಎಷ್ಟು ಮೂಲಭೂತವೋ ಅಷ್ಟೇ ಅತ್ಯಮೂಲ್ಯವಾಗಿದ್ದು, ನೀರಿನ ಸಮರ್ಪಕ ಬಳಕೆ, ಉಳಿತಾಯಕ್ಕಾಗಿ ಪ್ರತಿಯೊಬ್ಬರೂ ಶ್ರಮಿಸಬೇಕಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ ಖಂಡೂ ಹೇಳಿದರು.
ನಗರದ ಖಾಸಗಿ ಹೊಟೇಲ್ ಸಭಾಭವನದಲ್ಲಿ ಕೇಂದ್ರ ಸರ್ಕಾರ ಜಲ ಜೀವನ ಮಿಷನ್ ಯೋಜನೆಯಡಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಜಿಲ್ಲಾ ಹಂತದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜಲ ಜೀವನ ಮಿಷನ್ ಯೋಜನೆಯುವು ಪ್ರತಿಯೊಬ್ಬರಿಗೂ ನೀರನ್ನು ಪೂರೈಸುವ ಮಹತ್ವದ ಕಾರ್ಯವನ್ನು ಮಾಡುತ್ತಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ನಿವೃತ್ತ ಅಧೀಕ್ಷಕ ಅಭಿಯಂತರರು ಹಾಗೂ ಕೇಂದ್ರ ವಾಟರ್ ಸ್ಯಾನಿಟೇಶನ್ ಮತ್ತು ಹೈಜಿನ್ ತಜ್ಞನರಾದ ಚಂದ್ರಶೇಖರ್ ಮಾಸಗುಪ್ಪಿ ಅವರು ಜಲ ಜೀವನ್ ಮಿಷನ್ ಯೋಜನೆಯ ಗುರಿ, ಉದ್ದೇಶ ಮತ್ತು ಘಟಕಾಂಶಗಳು, ಸಮುದಾಯ ಭಾಗವಹಿಸುವಿಕೆ ಹಾಗೂ ಅದರ ಮಹತ್ವ, ಕಾಮಗಾರಿಗಳ ಗುಣಮಟ್ಟ ಪರಿಶೀಲನೆ ಹಾಗೂ ಸ್ವತ್ತುಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯ ಬಗ್ಗೆ ತರಬೇತಿ ನೀಡಿದರು. ಬಳಿಕ ರಾಜ್ಯ ಸಂಪನ್ಮೂಲ ವ್ಯಕ್ತಿ ಮತ್ತು ತರಬೇತುದಾರಾರದ ಜೋಸೆಫ್ ರೆಬೆಲ್ಲೋ ರವರು ಸ್ವಚ್ಛತೆ, ಶುಚಿತ್ವ ಹಾಗೂ ನೀರಿನ ಮಲೀನತೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ವಿಚಾರಗಳು ಹಾಗೂ ನೀರಿನ ಸುಸ್ಥಿರತೆ, ಜಲ ಸಂರಕ್ಷಣೆ ವಿಧಾನಗಳ ಬಗ್ಗೆ ತರಬೇತಿ ನೀಡಿದರು.
ಸಮಾಲೋಚಕರಾದ ಸೂರ್ಯನಾರಾಯಣ ಭಟ್ ಸ್ವಾಗತಿಸಿದರು. ಜಿಲ್ಲಾ ಎಎಒ ಯೋಜನಾ ವ್ಯವಸ್ಥಾಪಕ ವೆಂಕಟೇಶ್ ನಾಯಕ್ ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರಾದ ಪ್ರಕಾಶ, ಜಲ ಜೀವನ ಮಿಷನ್ ಯೋಜನೆ ಇಂಜಿನಿಯರ್ಗಳು ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಇದ್ದರು.