ಕಾರವಾರ: ಬೀದಿ ವ್ಯಾಪಾರಿಗಳಿಗೆ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಕಾರವಾರದ ನಗರದ ಬೀದಿವ್ಯಾಪಾರಿಗಳು ನಗರಸಭೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಕಾರವಾರದ ಜನತಾ ಬಜಾರಿನ ಬೀದಿಯಲ್ಲಿ ಅಬ್ಬಾಸ್ ಎನ್ನುವವರು ವ್ಯಾಪಾರ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ನಗರಸಭೆಯ ಸಿಬ್ಬಂದಿ ಅಂಗಡಿ ತೆಗೆಯಲು ಹೇಳಿದ್ದಾರೆ. ತೆಗೆಸುವುದಾದರೆ ಎಲ್ಲರನ್ನು ತೆಗೆಸಿ. ಒಬ್ಬೊಬ್ಬರಿಗೆ ಒಂದೊಂದು ನ್ಯಾಯ ಮಾಡಬಾರದು ಎಂದು ಸಣ್ಣ ಮಾತಿನ ಚಕಮಕಿ ನಡೆದಿದೆ.
ಬಳಿಕ ಸಿಬ್ಬಂದಿಯು ಅಂಗಡಿ ಸಾಮಾನುಗಳನ್ನು ನಗರಸಭೆ ವಾಹನದ ಮೂಲಕ ನಗರಸಭೆ ಆವರಣಕ್ಕೆ ತಂದಿದ್ದಾರೆ. ಇದರಿಂದಾಗಿ ಸಂಘಟಿತರಾದ 50ಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಸ್ಥರು ನಗರಸಭೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಹೈಕೋರ್ಟ್ ಆದೇಶದಲ್ಲಿರುವ ಯಾವ ನಿಯಮವನ್ನು ಪೌರಾಯುಕ್ತರು ಪಾಲಿಸುತ್ತಿಲ್ಲ.
ಈವರೆಗೆ ಬೀದಿಬದಿ ವ್ಯಾಪಾರಸ್ಥರೊಂದಿಗೆ ಒಂದೂ ಸಭೆ ನಡೆಸಿಲ್ಲ. ಈಗ ಏಕಾಏಕಿ ಅಂಗಡಿ ತೆರವುಗೊಳಿಸುವಂತೆ ಹೇಳುತ್ತಾರೆ ಎಂದು ಆರೋಪಿಸಿದರು. ಕೆಲ ಹೊತ್ತಿನ ಮಾತಿನ ಚಕಮಕಿಯ ಬಳಿಕ ಪೊಲೀಸರು ಪರಿಸ್ಥಿತಿ ತಿಳಿಸಿಗೊಳಿಸಿದರು.