ಕಾರವಾರ: ಗ್ರಾಹಕರು ವಸ್ತುಗಳು ಹಾಗೂ ಸೇವೆಯನ್ನು ದುಡ್ಡು ಕೊಟ್ಟು ಪಡೆಯುವಾಗ ಜಾಗೃತರಾಗಿರಬೇಕು. ಒಂದು ವೇಳೆ ವ್ಯವಹಾರದಲ್ಲಿ ಅಥವಾ ಸೇವೆಯಲ್ಲಿ ನ್ಯೂನತೆ ಕಂಡು ಬಂದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ಸಲ್ಲಿಸಿ ಪರಿಹಾರವನ್ನು ಪಡೆದುಕೊಳ್ಳಬೇಕು. ನಾವು ಜಾಹೀರಾತುಗಳಿಗೆ ಮರುಳಾಗದೆ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ಇದರಿಂದ ನಾವು ಮೋಸ ಹೋಗುವುದನ್ನು ತಪ್ಪಿಸಬಹುದು. ಆದ್ದರಿಂದ ಎಲ್ಲರೂ ಸಹ ಜಾಗೃತರಾಗಬೇಕು ಎಂದು ವಕೀಲರಾದ ಎಸ್ ವೈ ಶೇಜ್ವಾಡ್ಕರ್ ತಿಳಿಸಿದರು.
ಅವರು ಆಜಾದ್ ಯೂಥ್ ಕ್ಲಬ್ ರಾಷ್ಟ್ರೀಯ ಗ್ರಾಹಕರ ದಿನಾಚರಣೆ’ಯ ನಿಮಿತ್ತ ಸರಕಾರಿ ಪದವಿ ಪೂರ್ವ ಕಾಲೇಜು ಕಾರವಾರದಲ್ಲಿ ಹಮ್ಮಿಕೊಂಡ ಗ್ರಾಹಕ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಜೊತೆಗೆ ಗ್ರಾಹಕರ ರಕ್ಷಣಾ ಕಾಯಿದೆ ಕುರಿತು ವಿವರವಾಗಿ ತಿಳಿಸಿದರು. ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಮಾಂಡರ್ ಎ. ಆರ್. ಬಿ.ಕ್ಯಾಪ್ಟನ್ ಡಿಸೋಜರವರು ಮಾತನಾಡಿ ನಮಗೆ ಪ್ರತಿಯೊಂದು ವಿಷಯದಲ್ಲಿಯೂ ಹೆಚ್ಚಿನ ಜ್ಞಾನ ಅವಶ್ಯಕವಾಗಿದೆ. ಆದ್ದರಿಂದ ನಾವು ಯಾವುದೇ ವಸ್ತುಗಳನ್ನು ದುಡ್ಡು ಕೊಟ್ಟು ಖರೀದಿಸುವಾಗ ಅಥವಾ ದುಡ್ಡು ಕೊಟ್ಟು ಸೇವೆಯನ್ನು ಪಡೆಯುವಾಗ ಸಂಪೂರ್ಣವಾಗಿ ಜಾಗ್ರತರಾಗಿರುವುದು ಅವಶ್ಯಕವಾಗಿದೆ. ಇದರಿಂದ ನಾವು ಮೋಸ ಹೋಗುವುದನ್ನು ತಪ್ಪಿಸಬಹುದು.
ವಿದ್ಯಾರ್ಥಿಗಳಾದ ನಾವು ಇಂತಹ ಜ್ಞಾನವನ್ನು ವಿದ್ಯಾರ್ಥಿ ಜೀವನದಲ್ಲೇ ತಿಳಿದುಕೊಳ್ಳಬೇಕು ಎಂದು ಹೇಳಿದರು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ನಜೀರ್ ಅಹ್ಮದ್ ಯು.ಶೇಖ್ ಮಾತನಾಡಿ ಗ್ರಾಹಕರು ತಮಗೆ ಅನ್ಯಾಯವಾದಾಗ ಆಯೋಗದಲ್ಲಿ ದೂರನ್ನು ಸಲ್ಲಿಸಿ ಮೂರು ತಿಂಗಳ ಒಳಗೆ ಪರಿಹಾರವನ್ನು ಪಡೆಯಬಹುದಾಗಿದೆ ಎಂದು ಹೇಳಿದರು. ಜೊತೆಗೆ ದೂರನ್ನು ಸಲ್ಲಿಸುವ ಕ್ರಮವನ್ನು ತಿಳಿಸಿ ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಸತೀಶ್ ಬಿರ್ಕೋಡಿಕರ್ ಮಾತನಾಡಿ ಇಂತಹ ಕಾರ್ಯಕ್ರಮಗಳ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಹೇಳಿದರು.
ಕ. ಸಾ. ಪ ಸದಸ್ಯೆ ಫೈರೋಜಾ ಬೇಗಮ್ ಶೇಖ್ ಸ್ವಾಗತಿಸಿದರು. ಕ್ಲಬ್ ಅಧ್ಯಕ್ಷ ಮೊಹಮ್ಮದ್ ಉಸ್ಮಾನ್ ಶೇಖ್ ವಂದಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಮಾಣೇಶ್ವರ ನಾಯ್ಕ, ಜಯಾ ಭಟ್, ಕ್ಲಬ್ ನ ಮಾಜಿ ಅಧ್ಯಕ್ಷ ಮಹಮ್ಮದ್ ಹಸನ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಾರವಾರ ತಾಲೂಕಿನ ಬೇರೆ ಬೇರೆ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಸಾಮಾನ್ಯ ಜ್ಞಾನ ಸ್ಪರ್ಧೆಯನ್ನು ಏರ್ಪಡಿಸಿದ್ದು, ಮೆಡಿಕಲ್ ಕಾಲೇಜಿನ ಯುವರಾಜ ಎ.ಎನ್. ಪ್ರಥಮ, ಸರಕಾರಿ ಪದವಿ ಪೂರ್ವ ಕಾಲೇಜಿನ ಯತೀರಾಜ್ ಆರ್ ಉಳ್ಳೇಕರ್ ದ್ವಿ ತೀಯ,ಸೇಂಟ್ ಜೋಸೆಫ್ ಕಾಲೇಜಿನ ಪ್ರಫುಲ್ ಆರ್. ರಾಯ್ಕರ್ ತೃತಿಯ ಹಾಗೂ ಮೆಡಿಕಲ್ ಕಾಲೇಜಿನ ಶಿವಾನಂದ್ ಎಲ್. ಸಿ. ಸಮಾಧಾನಕರ ಬಹುಮಾನವನ್ನು ಪಡೆದುಕೊಂಡರು. ವಿಜೇತರಿಗೆ ಪ್ರಮಾಣ ಪತ್ರ, ನಗದು ಬಹುಮಾನ ಹಾಗೂ ಆಕರ್ಷಕ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು. ಕ್ಲಬ್ ನ ಮಾಜಿ ಅಧ್ಯಕ್ಷ ರೋಹನ್ ಭುಜಲೇ ಹಾಗೂ ಕಾರ್ಯದರ್ಶಿ ನಿಧಿ ನಾಯಕ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿ ಫಲಿತಾಂಶ ನೀಡಲು ಸಹಕರಿಸಿದರು.