ಕಾರವಾರ: ಅಬಕಾರಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಬೆಂಗಳೂರಿಗೆ ಹೊಸ ವರ್ಷಾಚರಣೆಗೆ ಸಾಗಿಸುತ್ತಿದ್ದ ಕೋಟ್ಯಾಂತರ ರೂ. ಮೌಲ್ಯದ ಅಕ್ರಮ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಅಬಕಾರಿ ಅಧಿಕಾರಿಗಳು ಗೋವಾದಿಂದ ಕರ್ನಾಟಕಕ್ಕೆ ಆಗಮಿಸುತ್ತಿದ್ದ ಲಾರಿಯನ್ನು ತಡೆದು ತಪಾಸಣೆ ನಡೆಸಿದ್ದಾರೆ. ಈ ವೇಳೆ ವಾಹನದಲ್ಲಿ 400 ಬಾಕ್ಸ್ ಗಳಲ್ಲಿದ್ದ ಒಟ್ಟೂ 750 ಮಿ.ಲೀ. ಯ 4800 ಬಾಟಲ್ ವಿಸ್ಕಿ ಹಾಗೂ 9 ಬಾಕ್ಸ್ ಗಳಲ್ಲಿ ಇದ್ದ 750 ಮಿ.ಲೀ. ಯ 108 ಬ್ರಾಂಡಿ ಬಾಟಲ್ ಸೇರಿ ಒಟ್ಟೂ 3681 ಲೀ. ಅಕ್ರಮ ಗೋವಾ ಮದ್ಯ ಪತ್ತೆಯಾಗಿದೆ. ಇದರ ಒಟ್ಟೂ ಮೌಲ್ಯ 1.17 ಕೋಟಿ ರೂ. ಗಳಾಗಿದ್ದು ವಾಹನ ಮೌಲ್ಯ 19.5 ಲಕ್ಷ ರೂ. ಆಗಿದೆ ಎಂದು ಅಬಕಾರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಕ್ರಮ ಮದ್ಯ, ವಾಹನ ಹಾಗೂ ಆರೋಪಿ ಚಾಲಕ ಬೆಂಗಳೂರಿನ ನರಸಿಂಹರಾಜು ಎಲ್. ಡಿ. ಎಂಬಾತನನ್ನು ವಶಕ್ಕೆ ಪಡೆದಿರುವ ಅಬಕಾರಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.