ಕಾರವಾರ: ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಕಾರವಾರ ನಗರ ಸಂಚಾರ ಪೊಲೀಸ್ ಠಾಣೆ, ಕಾರವಾರ ಮೊಬೈಲ್ ಡೀಲರ್ಸ್ ಅಸೋಸಿಯೇಷನ್, ರೋಟರಿ ಕ್ಲಬ್ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಕಾರವಾರದಲ್ಲಿ ರನ್ ಫಾರ್ ರೋಡ್ ಸೇಫ್ಟಿ ಜಾಗೃತಿ ಓಟ ನಡೆಯಿತು.
ಈ ಜಾಗೃತಿ ಓಟಕ್ಕೆ ಡಿವೈಎಸ್ಪಿ ವ್ಯಾಲಂಟೈನ್ ಡಿಸೋಜಾ ನಗರದ ಮಿತೃ ಸಮಾಜ ವೃತ್ತದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಬಳಿಕ ಇಲ್ಲಿಂದ ಆರಂಭವಾದ ಓಟ, ಸುಭಾಷ್ ವೃತ್ತ, ಬಸ್ ನಿಲ್ದಾಣ, ಸವಿತಾ ವೃತ್ತ, ಕಾಜುಬಾಗ- ಕೋಡಿಬಾಗ ರಸ್ತೆ, ಪಿಕಳೆ ರಸ್ತೆ, ಗ್ರೀನ್ ಸ್ಟ್ರೀಟ್, ಎಂಜಿ ರಸ್ತೆ ಮೂಲಕ ಹಾದು ಜಿಲ್ಲಾಧಿಕಾರಿ ಕಚೇರಿ ಬಳಿಯ ಐ ಲವ್ ಕಾರವಾರ ಗಾರ್ಡನ್ ಬಳಿ ಸಮಾಪ್ತಿಗೊಂಡಿತು.
ಓಟದ ವೇಳೆ ರಸ್ತೆ ಸುರಕ್ಷತಾ ನಿಯಮಗಳ ಫಲಕವನ್ನ ಹಿಡಿದು, ಜಾಗೃತಿ ಘೋಷವಾಕ್ಯಗಳನ್ನ ಕೂಗುತ್ತಾ ಜನರಲ್ಲಿ ರಸ್ತೆ ಸುರಕ್ಷತೆಯ ಕುರಿತು ತಿಳಿವಳಿಕೆ ಮೂಡಿಸುವ ಕಾರ್ಯ ಮಾಡಲಾಯಿತು. ನಗರ ಠಾಣಾ ಪಿಐ ಸಿದ್ದಪ್ಪ ಬೀಳಗಿ, ಕಾರಾಗೃಹ ಅಧೀಕ್ಷಕ ಈರಣ್ಣ, ಆರ್ಎಂ.ಒ ಡಾ.ವೆಂಕಟೇಶ, ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ಬಿ.ಹರಿಕಾಂತ್, ಮೊಬೈಲ್ ಅಸೋಸಿಯೇಷನ್ ಅಧ್ಯಕ್ಷ ಮಿಥುನ್, ರೋಟರಿ ಅಧ್ಯಕ್ಷ ರಾಘವೇಂದ್ರ ಪ್ರಭು, ಪಿಎಸ್ಐಗಳಾದ ಸಂತೋಷ್, ನಾಗಪ್ಪ ಸೇರಿದಂತೆ ಪಹರೆ, ರೋಟರಿಯ ಸದಸ್ಯರು, ಪತ್ರಕರ್ತರು, ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.