ಕಾರವಾರ: ಇಲ್ಲಿನ ಕಾಳಿ ನದಿ ನಡುಗಡ್ಡೆಯಲ್ಲಿರುವ ನೆಲೆಸಿರುವ ಶ್ರೀ ಕಾಳಿಕಾ ಮಾತೆಯ ಜಾತ್ರಾ ಮಹೋತ್ಸವ ಬುಧವಾರ ಅದ್ದೂರಿಯಾಗಿ ನಡೆಯಿತು.
ನೂರಾರು ಜನರು ದೋಣಿಗಳ ಮೂಲಕ ಸಾಗಿ ಶ್ರೀ ಕಾಳಿ ಮಾತೆಯ ದರ್ಶನ ಪಡೆದರು.
ನಗರದ ಕೊಡಿಭಾಗದಿಂದ ಸುಮಾರು ೨ ಕಿ.ಮೀ ದೂರದ ವಿಶಾಲ ದ್ವೀಪದಲ್ಲಿ ನೆಲೆಯಾಗಿರುವ ಕಾಳಿ ದೇವಿಯನ್ನು ಅನಾದಿಕಾಲದಿಂದಲೂ ಪೂಜಿಸಲಾಗುತ್ತಿದೆ. ಸುತ್ತಲೂ ಕಾಳಿ ನದಿ ತುಂಬಿ ಹರಿಯುತ್ತಿದ್ದರೂ ದ್ವೀಪ ಹಸಿರನ್ನು ತುಂಬಿಕೊಂಡು ವಿಶಾಲವಾಗಿದೆ.
ಪ್ರತಿ ವರ್ಷದಂತೆ ಈ ಬಾರಿಯು ಮೂರು ದಿನಗಳ ಜಾತ್ರೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಜಾತ್ರೆಯ ಮೊದಲ ದಿನ ಹೋಮ ಹವನ ಸೇರಿದಂತೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗುವುದು.
ಈ ಕಾಳಿ ದೇವಿಯ ಜಾತ್ರೆ ವಿಶಿಷ್ಟವಾಗಿದೆ. ಜಾತ್ರೆಗೆ ತೆರಳಬೇಕೆಂದರೆ ದೋಣಿ ಮೂಲಕವೇ ಸಾಗಬೇಕು. ಕಾಳಿ ನದಿಯ ನಡುಗಡ್ಡೆಯಲ್ಲಿ ದೇವಿ ಜಾತ್ರೆ ನಡೆಯುವುದರಿಂದ ಇಲ್ಲಿಗೆ ತೆರಳುವ ಪ್ರತಿಯೊಬ್ಬರು ದೋಣಿಯನ್ನೇ ಅವಲಂಬಿಸಬೇಕು. ಇಂತಹ ವಿಶಿಷ್ಟ ಅನುಭವ ಪಡೆಯುವುದಕ್ಕಾಗಿಯೇ ಸಾಕಷ್ಟು ಜನರು ಜಿಲ್ಲೆಯಿಂದ ಮಾತ್ರವಲ್ಲದೆ ಗೋವಾ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯದಿಂದಲೂ ಸಾಕಷ್ಟು ಭಕ್ತರು ದೇವಿಯ ದರ್ಶನ ಪಡೆಯಲು ಆಗಮಿಸಿದ್ದರು.