ಕಾರವಾರ: ಇಲ್ಲಿನ ಕೂರ್ಮಗಡ ನಡುಗಡ್ಡೆಯಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ನರಸಿಂಹದೇವರ ವಾರ್ಷಿಕ ಜಾತ್ರಾ ಮಹೋತ್ಸವ ಶುಕ್ರವಾರ ಅದ್ದೂರಿಯಾಗಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜ್ರಂಭಣೆಯಿಂದ ನೆರವೇರಿತು.
ಭಕ್ತರು ನರಸಿಂಹದೇವರ ದರ್ಶನ ಪಡೆಯಲು ಬೆಳಗ್ಗೆಯಿಂದಲೇ ತಾಲೂಕಿನ ಬೈತಖೋಲ, ಕೋಡಿಬಾಗ, ಅಲಿಗದ್ದಾ, ಮುದಗಾ, ದೇವಬಾಗ, ಮಾಜಾಳಿ, ಅಂಕೋಲಾದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೋಣಿಗಳಲ್ಲಿ ಸಮುದ್ರ ಮಾರ್ಗವಾಗಿ ನಡುಗಡ್ಡೆ ತಲುಪಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡರು. ಈ ಕೂರ್ಮಗಡದ ಶ್ರೀ ನರಸಿಂಹದೇವರ ಜಾತ್ರಾ ಮಹೋತ್ಸವಕ್ಕೆ ಗೋವಾ ರಾಜ್ಯದಿಂದಲೂ ಸಾಕಷ್ಟು ಭಕ್ತರು ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿದರು.
ಪುರಾತನ ಪರಂಪರೆಯಂತೆ ನಡೆದುಕೊಂದು ಬಂದ ಶ್ರೀ ನರಸಿಂಹ ದೇವರ ಉತ್ಸವ ಮೂರ್ತಿಯನ್ನು ಕಡವಾಡದಿಂದ ಕೋಡಿಬಾಗಕ್ಕೆ ತಂದು ಪೂಜೆ ಸಲ್ಲಿಸಲಾಯಿತು. ನಂತರ ಬೆಳಗ್ಗೆ ದೋಣಿ ಮೂಲಕ ಕೂರ್ಮಗಡ ನಡುಗಡ್ಡೆಗೆ ತರಲಾಗುತ್ತದೆ. ಕೂರ್ಮಗಡದಲ್ಲಿ ಧಾರ್ಮಿಕವಾಗಿ ವಿವಿಧ ಪೂಜೆ ಪುನಸ್ಕಾರ ನಡೆದ ನಂತರ ನಡುಗಡ್ಡೆಗೆ ಆಗಮಿಸಿದ ಭಕ್ತರಿಗೆ ದರ್ಶನ ಕಲ್ಪಿಸಲಾಗುತ್ತದೆ.
ನಡುಗಡ್ಡೆಯಲ್ಲಿ ಭಕ್ತಾದಿಗಳಿಂದ ಪೂಜೆ, ಅಭಿಷೇಕ, ಬಾಳೆಗೊನೆ ಹರಕೆ, ಬಾವುಟ ಸಲ್ಲಿಕೆ ಇತ್ಯಾದಿ ಕಾರ್ಯಗಳು ನಡೆದವು. ಮಧ್ಯಾಹ್ನದವರೆಗೂ ಭಕ್ತಾದಿಗಳು ಬೋಟ ಮೂಲಕ ನಡುಗಡ್ಡೆಯತ್ತ ಪ್ರಯಾಣಿಸುತ್ತಿದ್ದುದು ಕಂಡುಬಂತು. ಈ ಸಂದರ್ಭದಲ್ಲಿ ಸಾವಿರಾರು ಜನ ದೇವರ ದರ್ಶನ ಪಡೆದು ನಡುಗಡ್ಡೆಯ ಸುತ್ತ ಸಂಚರಿಸಿದರು. ಜಿಲ್ಲಾಡಳಿತದ ಸೂಚನೆಯಂತೆ ಬೈತಖೋಲದ ಮೀನುಗಾರಿಕಾ ಜಟ್ಟಿಯಿಂದ ಕೂರ್ಮಗಡಕ್ಕೆ ತೆರಳಲು ಅವಕಾಶ ಕಲ್ಪಿಸಲಾಗಿತ್ತು. ಸ್ಥಳದಲ್ಲಿ ಪೊಲೀಸರು, ಮೀನುಗಾರಿಕಾ ಇಲಾಖೆ, ಬಂದರು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿದ್ದು ಕರ್ತವ್ಯ ಸಲ್ಲಿಸಿದರು. ಬೈತಖೋಲದಿಂದ ತೆರಳಿದ್ದ ಬೋಟುಗಳು ಉಚಿತವಾಗಿ ಒಯ್ದು ವಾಪಸ್ ತಂದರು. ತೆರಳುವ ಮುನ್ನ ಜನರು ಸರದಿ ಸಾಲಿನಲ್ಲಿ ನಿಂತು ಬೋಟು ಹತ್ತುವ ವ್ಯವಸ್ಥೆಯನ್ನು ಮಾಡಲಾಗುತ್ತು. ನಡುಗಡ್ಡೆಗೆ ತಲುಪುತ್ತಿದ್ದಂತೆ ದೇವರಿಗೆ ತಮ್ಮ ಹರಕೆ ಸಲ್ಲಿಸಲು ಹರ ಸಾಹಸ ಪಡಬೇಕಾಯಿತು. ಬೆಳಗ್ಗೆಯಿಂದ ಸರದಿ ಸಾಲಿನಲ್ಲಿ ನಿಂತು ತಮ್ಮ ಹರಕೆಗಳನ್ನು ಸಲ್ಲಿಸಿದರು.