ಕಾರವಾರ: ತಾಲೂಕಿನ ಶಿರವಾಡದಲ್ಲಿ ಸುಮಾರು ೪೦ ವರ್ಷಗಳಿಂದ ನಿರಾಶ್ರಿತರ ಹಾಗೂ ಅರಣ್ಯ ಭೂಮಿಯಲ್ಲಿ ವಾಸಿಸುತ್ತಿರುವ ೨೦೦ಕ್ಕೂ ಹೆಚ್ಚು ಕುಟುಂಬಗಳ ನಿವೇಶನಗಳನ್ನು ಸಕ್ರಮ ಮಾಡಿಕೊಡುವಂತೆ ಒತ್ತಾಯಿಸಿ ಸ್ಥಳಿಯರು ಜಿಲ್ಲಾಡಳಿತಕ್ಕೆ ಶನಿವಾರ ಮನವಿ ಸಲ್ಲಿಸಿದರು.
ನಿವೇಶನವಿಲ್ಲದೇ ಇಲ್ಲಿನ ಜನರು ಕನಿಷ್ಟ ಮೂಲಭೂತ ಸೌಕರ್ಯಗಳು ದೊರೆಯದೇ ವಂಚಿತರಾಗುತ್ತಿದ್ದಾರೆ. ಈಗಾಗಲೇ ಅತಿಕ್ರಮಣ ಸಕ್ರಮ ಮಾಡಿಕೊಡುವ ಕುರಿತು ಹಲವಾರು ಬಾರಿ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ನೀಡುತ್ತ ಬರಲಾಗಿದೆ. ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಓ ಅವರ ಬಳಿ ಈಗಾಗಲೇ ಹಲವು ಬಾರಿ ಚರ್ಚಿಸಲಾಗಿದೆ.
ಪರಿಹಾರ ಕೊಡಿಸುವುದಾಗಿ ಮೌಖಿಕವಾಗಿ ಭರವಸೆ ನೀಡಿದ್ದಾರಾದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿ ವಾಸ ಮಾಡುತ್ತಿರುವ ಕುಟುಂಬಗಳಿಗೆ ಪರ್ಯಾಯ ಜಾಗಕ್ಕೆಸ್ಥಳಾಂತರಿಸಿದರೂ ಹೋಗಲು ಸಿದ್ಧರಿದ್ದಾರೆ. ಇರುವ ಸ್ಥಳದಲ್ಲಿಯೇ ಸಕ್ರಮ ಮಾಡಿಕೊಟ್ಟರೂ ವಾಸಿಸುತ್ತಾರೆ. ಇನ್ನು ಈಗಾಗಲೇ ಕೆಲವರು ಇದು ತಮ್ಮ ನಿರಾಶ್ರಿತ ಜಾಗವೆಂದು ಇಲ್ಲಿನ ಜನರ ಜೊತೆ ವಾದಕ್ಕಿಳಿಯುತ್ತಿರುವ ಘಟನೆಗಳು ನಡೆಯುತ್ತಿವೆ. ಇಲ್ಲಿನ ಜಾಗ ಖಾಲಿ ಮಾಡಲು ವಕೀಲರುಗಳ ಮುಖಾಂತರ ಇಲ್ಲಿನ ಸ್ಥಳೀಯರಿಗೆ ನೋಟೀಸ್ ಗಳನ್ನು ನೀಡಲಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ವಾರದೊಳಗೆ ಈ ಬಗ್ಗೆ ಪರಿಹಾರ ಸಿಗದೇ ಹೋದರೆ ಶಿರವಾಡದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪಾದಯಾತ್ರೆಯ ಮೂಲಕ ಪ್ರತಿಭಟನಾ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಲಿಷಾ ಜಿ. ಯಲಕಪಾಟಿ, ಪ್ರಮುಖರಾದ ಯಲ್ಲಪ್ಪ ವಡ್ಡರ, ಶಂಕರ ವಡ್ಡರ, ನರಸಿಂಹ ನಾಯ್ಕ, ಜಾಫರ್ ಕಜಗಿ, ಗೋಪಾಲ ಬೋಯರ್, ಶಾಂತಾ ಆಚಾರಿ ಮುಂತಾದವರು ಇದ್ದರು.