ಕಾರವಾರ: ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೀಸಲಾತಿಯೊಂದಿಗೆ ಅದರ ಉಪಜಾತಿಗಳ ಜನಸಂಖ್ಯೆಯನ್ನು ಆಧಾರಿಸಿ ಒಳ ಮೀಸಲಾತಿ ಜಾರಿಗೆ ತರಬೇಕು ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎಸ್. ಫಕ್ಕೀರಪ್ಪ ಹೇಳಿದರು.
ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ (Press meet )ನಡೆಸಿ ಮಾತನಾಡಿದ ಅವರು ಪರಿಶಿಷ್ಟ ಜಾತಿ ಹಾಗೂ ಪಂಗಡದಲ್ಲಿಯೂ ಶ್ರೇಣಿಕೃತ ಜಾತಿ ವ್ಯವಸ್ಥೆ ಇರುವುದರಿಂದ ಸರಕಾರದ ಮೀಸಲಾತಿ ಪಡೆಯಲು ಕೆಲವರಿಗೆ ಸಾಧ್ಯವಾಗುತ್ತಿಲ್ಲ. ಪ. ಜಾತಿಯಲ್ಲಿರುವ ಅತಿ ದುರ್ಬಲ ಜಾತಿಯವರು ಅದೇ ಜನಾಂಗದ ಪ್ರಬಲ ಜಾತಿಯವರೊಡನೆ ಸ್ಪರ್ಧಿಸಿ ಮೀಸಲಾತಿ ಪಡೆದುಕೊಳ್ಳುವ ಸ್ಥಿತಿ ಇದೆ.
ಹೀಗಾಗಿ ಪರಿಶಿಷ್ಟ ಜಾತಿಯ ೧೦೧ ಉಪ ಜಾತಿಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಪ್ರತ್ಯೇಕ ಒಳ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ಎಚ್. ಕೆ. ಶಿವಾನಂದ, ಜಿಲ್ಲಾ ಸಂಘಟನಾ ಸಂಚಾಲಕರಾದ ಮಂಜುನಾಥ ಹಳ್ಳೇರ, ಆಂಜನೇಯ ವಡ್ಡರ, ಹಳಿಯಾಳ ತಾಲೂಕು ಘಟಕದ ಅಧ್ಯಕ್ಷ ಅಶೋಕ ಮೇತ್ರಿ, ಹೊನ್ನಾವರ ಪ್ರಭು ಹಳ್ಳೇರ, ಪರಶುರಾಮ, ಲಕ್ಷ್ಮಣ, ಮಹಿಳಾ ಅಧ್ಯಕ್ಷೆ ಮಾದೇವಿ ಹಳ್ಳೇರ ಇದ್ದರು.