ಕಾರವಾರ: ಜಿಲ್ಲೆಯಲ್ಲಿ ಸಮುದ್ರ ವ್ಯಾಪ್ತಿಯಲ್ಲಿ ಬೆಳಕು ಮೀನುಗಾರಿಕೆಯನ್ನು ಬಂದ್ ಮಾಡುವಂತೆ ಆಗ್ರಹಿಸಿ ಜಿಲ್ಲೆಯ ಕರಾವಳಿಯ ಮೀನುಗಾರರು ಕಾರವಾರದ ಜಿಲ್ಲಾಧಿಕಾರಿ ಕಚೇರಿ ಬಳಿಕ ಬೃಹತ್ ಪ್ರತಿಭಟನೆಯನ್ನು(protest) ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಮೆರವಣಿಗೆಯ ಮೂಲಕ ಬಂದ ಮೀನುಗಾರರು ಬೆಳಕು ಮೀನುಗಾರಿಕೆ (Light fishing) ನಡೆಸುವವರ ವಿರುದ್ಧ ಘೋಷಣೆ ಕೂಗಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಮೀನುಗಾರಿಕೆ ಭವಿಷ್ಯದ ದೃಷ್ಟಿಯಿಂದ ರಾಜ್ಯ ಮತ್ತು ಕೇಂದ್ರ ಸರಕಾರವೂ ಅವೈಜ್ಞಾನಿಕ ಮೀನುಗಾರಿಕೆಯನ್ನು ನಿಷೇಧ ಮಾಡಿದ್ದರೂ ಸಹ ಯಾವುದೇ ಪ್ರಯೋಜನವಾಗುತ್ತಿಲ್ಲ. ಈ ಬಗ್ಗೆ ಮೀನುಗಾರಿಕೆ ಇಲಾಖೆ, ಕರಾವಳಿ ಕಾವಲು ಪಡೆಯ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕುಮಟಾದ ಮೀನುಗಾರ ಪ್ರಮುಖರಾದ ನಾಗರಾಜ್ ಹರಿಕಂತ್ರ ಅವರು ಬೆಳಕು ಮೀನುಗಾರಿಕೆ ನಡೆಸುವವರನ್ನು ಸ್ಥಳೀಯ ಮೀನುಗಾರರು ತಮ್ಮ ಜೀವ ಹಂಗು ಬಿಟ್ಟು ಹಿಡಿದು ತಂದು ಇಲಾಖೆಗೆ ಒಪ್ಪಿಸಿದರೂ ದಂಡ ಹಾಕಿ ಬಿಡುತ್ತಿದ್ದಾರೆ. ಇದರಿಂದ ಬೆಳಕು ಮೀನುಗಾರಿಕೆ ನಡೆಸುವವರಿಗೆ ಯಾವುದೇ ನಷ್ಟವಾಗುತ್ತಿಲ್ಲ. ಬೆಳಕು ಮೀನುಗಾರಿಕೆ ನಡೆಸಿ ಕೋಟ್ಯಾಂತರ ರೂ. ಮೀನುಗಳನ್ನು ಅವರು ಸಮುದ್ರದಲ್ಲಿ ಹಿಡಿಯುತ್ತಿದ್ದಾರೆ. ಇದರಿಂದ ಸಮುದ್ರದಲ್ಲಿ ಮತ್ಸ್ಯಕ್ಷಾಮ ಭವಿಷ್ಯದಲ್ಲಿ ಸೃಷ್ಟಿಯಾಗಲಿದೆ.
ಈ ಬಗ್ಗೆ ಸರಕಾರದ ಆದೇಶವಿದ್ದರೂ ಸಹ ಅಧಿಕಾರಿಗಳು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಬಳಿಕ ಮನವಿ ಸ್ವೀಕರಿಸಲು ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಹಾಗೂ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿದ್ದರೂ ಸಹ ಮೀನುಗಾರರು ಮನವಿ ನೀಡದೆ, ಕ್ರಮಕೈಗೊಳ್ಳದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೆಳಕು ಮೀನುಗಾರಿಕೆ ನಿಷೇಧ ಇದ್ದರೂ ಸಹ ಅಧಿಕಾರಿಗಳು ಕ್ರಮಕೈಗೊಳ್ಳದೆ ಇರುವುದರ ಬಗ್ಗೆ ಆಕ್ಷೇಪಿಸಿದರು. ಬಳಿಕ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸುವಂತೆ ಒತ್ತಾಯಿಸಿದರು. ಅದಾದ ಬಳಿಕ ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಮೀನುಗಾರರ ಮನವಿ ಸ್ವೀಕರಿಸಿ, ಮೀನುಗಾರರ ಸಮಸ್ಯೆಯನ್ನು ಆಲಿಸಿದರು.