ಕಾರವಾರ: ಅರಣ್ಯವಾಸಿಗಳ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಜ.೧೫ ರಂದು ಶಿರಸಿಗೆ ಆಗಮಿಸಲಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಭೇಟಿಯಾಗಲಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಕಾರವಾರ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಅರಣ್ಯವಾಸಿಗಳ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ೩೨ ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಪ್ರಯತ್ನದ ಭಾಗವಾಗಿ ಶಿರಸಿಯ ಗಾಂಧಿ ಪ್ರತಿಮೆಯ ಮುಂದೆ ಕಪ್ಪುಪಟ್ಟಿ ಧರಿಸಿ ಧರಣಿ ಮಾಡಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಹತ್ತು ಬೇಡಿಕೆಗಳ ಮನವಿ ಮುಖ್ಯಮಂತ್ರಿ ಅವರಿಗೆ ಸಲ್ಲಿಸಲಾಗುವುದು. ಸುಪ್ರೀಂ ಕೋರ್ಟನಲ್ಲಿ ಅರಣ್ಯವಾಸಿಗಳ ಪರ ತಿದ್ದುಪಡಿ ಪ್ರಮಾಣ ಪತ್ರವನ್ನ ಸಲ್ಲಿಸುವುದು, ೧೯೭೮ ರ ಪೂರ್ವ ಕೇಂದ್ರ ಸರಕಾರದಿಂದ ಮಂಜೂರಿಗೆ ಶೀಫಾರಸ್ಸು ಆಗಿರುವ ೨,೫೧೩ ಕುಟುಂಬಳಿಗೆ ಹಕ್ಕು ಪತ್ರ ನೀಡಬೇಕು. ಶರಾವತಿ ಅಭಯಾರಣ್ಯಕ್ಕೆ ಉತ್ತರ ಕನ್ನಡ ಜಿಲ್ಲೆಯಿಂದ ಹೆಚ್ಚುವರಿ ಅರಣ್ಯ ಪ್ರದೇಶ ಸೇರಿಸಿರುವುದು ಹಿಂದಕ್ಕೆ ಪಡೆಯಬೇಕು. ನಿರಂತರ ಅರಣ್ಯವಾಸಿಗಳ ಮೇಲೆ ಅರಣ್ಯಾಧಿಕಾರಿಗಳಿಂದ ಜರುಗುವ ದೌರ್ಜನ್ಯ ನಿಯಂತ್ರಿಸಬೇಕು ಎಂದು ಒತ್ತಾಯ ಮಾಡಲಾಗಿದೆ. ಸರಕಾರದ ಸೌಲಭ್ಯದಿಂದ ಅರಣ್ಯವಾಸಿಗಳು ವಂಚಿತರಾಗದ ರೀತಿಯಲ್ಲಿ ಸವಲತ್ತು ಒದಗಿಸುವ ಕುರಿತು ಮುಖ್ಯಮಂತ್ರಿಗೆ ನೀಡುವ ಮನವಿಯಲ್ಲಿ ಪ್ರಸ್ತಾಪಿಸಲಾಗುವುದು. ಜಿಲ್ಲಾದ್ಯಂತ ಜಿಲ್ಲಾದ್ಯಂತ ಅರಣ್ಯವಾಸಿಗಳ ಮೇಲೆ ಅರಣ್ಯ ಅಧಿಕಾರಿಗಳು ಕಾನೂನು ಬಾಹಿರ ಒಕ್ಕಲೆಬ್ಬಿಸುವ ಸಂದರ್ಭದಲ್ಲಿ ಪೋಲೀಸ್ ಇಲಾಖೆಯ ಸಮಕ್ಷಮ ಕ್ರೀಮಿನಲ್ ಮೊಕದ್ದಮೆ ದಾಖಲಿಸಿದ್ದು, ಸದ್ರಿ ಕ್ರಿಮಿನಲ್ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲು ಅಗ್ರಹ. ಹಾಗೂ ಜಿಲ್ಲೆಯ ಅರಣ್ಯ ಅತಿಕ್ರಮಣದಾರರ ಸಮಸ್ಯೆ ಬಗೆಹರಿಸುವ ದಿಶೆಯಲ್ಲಿ ಹೋರಾಟಗಾರರ ವೇದಿಕೆಯ ಸಮಕ್ಷಮ ಉನ್ನತ ಮಟ್ಟದ ಸಮಿತಿ ರಚಿಸಲು ಮುಖ್ಯಮಂತ್ರಿಗೆ ಆಗ್ರಹಿಸಲಾಗುವುದು ಎಂದು ತಿಳಿಸಿದ್ದಾರೆ.