ಕಾರವಾರ : ಶ್ರೀ ಶಿವಯೋಗಿ ಸಿದ್ದರಾಮನವರು ಭಕ್ತಿ ಭಂಡಾರಿ ಬಸವಣ್ಣನವರ ಸಮಕಾಲಿನ ವಚನಕಾರರಾಗಿ ಈ ನಾಡಿನ ಶ್ರೇಷ್ಠ ಸಾಧಕರಾಗಿದ್ದರು ಎಂದು ತಹಸೀಲ್ದಾರ್ ಆರ್.ವಿ. ಕಟ್ಟಿ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಶ್ರೀ ಶಿವಯೋಗಿ ಸಿದ್ದರಾಮನವರು ಅಪ್ರತಿಮ ಯೋಗಿಗಳು ಅವರ ವಚನಗಳು,ತತ್ವಗಳು ಸದಾ ನಮಗೆ ಪ್ರೇರಣೆಯಾಗಿವೆ ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಾವೆಲ್ಲರೂ ಸಾಗಬೇಕಾಗಿದೆ ಎಂದುರು.
ಬಳಿಕ ಕ.ಸಾ. ಪರಿಷತ್ ಕಾರ್ಯದರ್ಶಿ ಗಣೇಶ ಬಿಷ್ಟಣ್ಣನವರ ಮಾತನಾಡಿ, ಈ ನಾಡಿನ ಪುಣ್ಯದ ಫಲವಾಗಿ ಸಿದ್ದರಾಮನಂತಹ ಶಿವಯೋಗಿಗಳನ್ನು ನಾವೆಲ್ಲರೂ ನೋಡಲು ಸಾಧ್ಯವಾಯಿತು, ಸಮತೆಯ ಗಾರುಡಿಗ ಸೊನ್ನಲಗಿಯ ಸಿದ್ದರಾಮರು ಸಾಹಿತ್ಯಕ್ಕೆ ಸಾಹಿತ್ಯ ನೀಡಿ, ಶಾಸ್ತ್ರಕ್ಕೆ ಶಾಸ್ತ್ರ ನೀಡಿ ವಚನ ವಾಙ್ಮಯ ಪರಂಪರೆಯ ಅಪೂರ್ವ ಹರಿಕಾರನೆನಿಸಿದ್ದಾರೆ, ಯೋಗಿಯ ಶರೀರ ವೃಥಾಯ ಹೋಗಲಾಗದು ಪುಣ್ಯವ ಮಾಡುವದು. ಲೋಕಕೆ ಎಂಬ ಆದರ್ಶಗಳನ್ನು ಹೊತ್ತು ಕೆರೆ, ಬಾವಿ, ಉದ್ಯಾನವನ, ಛತ್ರಗಳನ್ನು ಮಾಡಿಸಿದನು ಕಾಯಕಯೋಗದಲ್ಲಿ ಮಗ್ನನಾಗಿದ್ದ ಸಿದ್ದರಾಮರನ್ನು ಅಲ್ಲಮಪ್ರಭು ಕಲ್ಯಾಣಕ್ಕೆ ಕರೆದುಕೊಂಡು ಬಸವಣ್ಣನವರ ದರ್ಶನ ಮಾಡಿಸಿ ಚೆನ್ನಬಸವಣ್ಣನಿಂದ ಲಿಂಗ ದೀಕ್ಷೆ ಕೊಡಿಸಿದರು.
ವಚನ ಭಂಡಾರದ ಅಮೂಲ್ಯರತ್ನವಾಗಿರುವ ಇವರು ಇಂದಿಗೂ ಪ್ರಸ್ತುತವಾಗಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಕೆ.ಎಮ್.ರಾಮಚಂದ್ರ, ಭೋವಿ ಸಮಾಜದ ಜಿಲ್ಲಾಧ್ಯಕ್ಷರಾದ ತಿಮ್ಮಾ ರೆಡ್ಡಿ, ಮಾಜಿ ಅಧ್ಯಕ್ಷರಾದ ಭರಮಪ್ಪ ಕಟ್ಟಿಮನಿ,ಶಿಕ್ಷಕರಾದ ಮಹದೇವ ರಾಣೆ ಹಾಗೂ ವಿದ್ಯಾರ್ಥಿಗಳು ಇದ್ದರು.