ಕಾರವಾರ: ನಗರದ ಬೈತಖೋಲದ ಶ್ರೀ ಭೂದೇವಿ ಗುಡ್ಡದಲ್ಲಿ ನೌಕಾನೆಲೆಯವರು ಅವೈಜ್ಞಾನಿಕವಾಗಿ ಹಾಗೂ ಕಾನೂನು ಬಾಹಿರವಾಗಿ ರಸ್ತೆ ಕಾಮಗಾರಿ ನಡೆಸುತ್ತಿದ್ದು ಇದರಿಂದ ಭೂಕುಸಿತದ ಭೀತಿ ಉಂಟಾಗಿದೆ ಎಂದು ಬೈತಖೋಲ-ಅಲಿಗದ್ದಾ ನಿವಾಸಿತರ ಸಂಘದ ಅಧ್ಯಕ್ಷ ಪ್ರೀತಮ ಮಾಸೂರಕರ ಆರೋಪಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ (Press meet)ನಡೆಸಿ ಮಾತನಾಡಿದ ಅವರು ಒಂದು ವರ್ಷದ ಹಿಂದೆ ಈ ಭಾಗದಲ್ಲಿ ಕಾಮಗಾರಿ ನಡೆಯುತ್ತದೆ ಎಂಬುದನ್ನು ತಿಳಿದ ತಕ್ಷಣ ಸ್ಥಳೀಯ ನಿವಾಸಿಗಳೆಲ್ಲ ಸೇರಿ ಜಿಲ್ಲಾಡಳಿತಕ್ಕೆ ಮನವಿ ನೀಡಿ ಈ ಬಗ್ಗೆ ನೌಕಾ ಅಧಿಕಾರಿಗಳೊಂದಿಗೆ ಸಭೆ ನಡೆಸಲು ವಿನಂತಿಸಿದ್ದೆವು. ಆ ಬಳಿಕ ಕಾಮಗಾರಿ ನಡೆದಿರಲಿಲ್ಲ. ಆದರೆ ಇತ್ತೀಚಿನ ಕೆಲವು ದಿನಗಳಿಂದ ನೌಕಾ ಪ್ರದೇಶದಿಂದ ಗುಡ್ಡವನ್ನು ಕೊರೆದು ರಸ್ತೆ ಕಾಮಗಾರಿ ಆರಂಭಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಸೂಕ್ತ ಉತ್ತರ ನೀಡುತ್ತಿಲ್ಲ. ಗುಡ್ಡದ ತಪ್ಪಲಲ್ಲಿ ಸಾಕಷ್ಟು ಮನೆಗಳಿವೆ. ತಾಲೂಕಿನ ವಿವಿಧೆಡೆ ಗುಡ್ಡ ಕುಸಿತಗಳು ಸಂಭವಿಸಿ ಅಪಾರ ಪ್ರಾಣ ಹಾಗೂ ಆಸ್ತಿ ಪಾಸ್ತಿ ಹಾನಿ ಉಂಟಾಗಿದೆ. ಅದರಲ್ಲೂ ಇಲ್ಲಿನ ಕರಾವಳಿ ಪ್ರದೇಶವನ್ನು ದುರ್ಬಲ ಪ್ರದೇಶ ಎಂದು ಗುರುತಿಸಲಾಗಿದೆ. ಆದರೂ ಇಂತಹ ಪ್ರದೇಶದಲ್ಲಿ ಅವಶ್ಯಕ ಪರವಾನಿಗೆಯನ್ನು ಪಡೆಯದೇ ಕಾಮಗಾರಿ ನಡೆಸಲಾಗುತ್ತಿದೆ. ಈ ಸ್ಥಳದಲ್ಲಿ ಭೂ ಕುಸಿತ ಉಂಟಾದರೆ ನೂರಾರು ಮನೆಗಳೊಂದಿಗೆ ಸಾವಿರಾರು ಮಂದಿ ಪ್ರಾಣ ಕಳೆದುಕೊಳ್ಳುವ ಭೀತಿ ಎದುರಾಗಿದೆ ಎಂದರು.
ಈ ಕಾಮಗಾರಿಗೆ ಸಂಬಂಧಿಸಿದಂತೆ ಕಾಮಗಾರಿ ಕೈಗೊಂಡಿರುವವರಿಗೆ ಸಂಬAಧಪಟ್ಟ ದಾಖಲೆಗಳನ್ನು ನೀಡಲು ಹೇಳಿದ್ದೆವು. ರಸ್ತೆ ಕಾಮಗಾರಿ ಕೈಗೊಂಡಿರುವ ಜಮೀನಿನ ಮಾಲಿಕತ್ವ, ಪರಿಸರ ಪ್ರಭಾವದ ಮೌಲ್ಯಮಾಪನ ಅಧ್ಯಯನ ವರದಿ, ಸಿಆರ್ಝಡ್ ಪ್ರಮಾಣ ಪತ್ರ, ನಗರಸಭೆ ಪರವಾನಗಿ ಪ್ರಮಾಣ ಪತ್ರ, ಅರಣ್ಯ ಇಲಾಖೆ ಪರವಾನಗಿ ಸೇರಿದಂತೆ ವಿವಿಧ ೧೫ ದಾಖಲೆಗಳನ್ನು ಕೇಳಿದ್ದರೂ ಇದುವರೆಗೂ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಅವರು ಕಾನೂನು ಬಾಹಿರವಾಗಿ ಮುಂಬೈ ಮೂಲದ ಗುತ್ತಿಗೆ ಕಂಪನಿಯ ಮೂಲಕ ಕಾಮಗಾರಿ ನಡೆಸುತ್ತಿದ್ದಾರೆ.
ಈ ಕಾಮಗಾರಿಗೆ ಸುಮಾರು ೧೨೦೦ಕಗಕೂ ಹೆಚ್ಚು ಗಿಡ-ಮರಗಳ ಮಾರಣಹೋಮ ನಡೆಸಿದ್ದು ಈ ಬಗ್ಗೆ ಪರಿಸರ, ಅರಣ್ಯ ಇಲಾಖೆಯಿಂದ ಅನುಮತಿಯನ್ನು ಪಡೆಯಲಾಗಿದೆಯೇ ಎಂಬ ಬಗ್ಗೆ ಮಾಹಿತಿ ನೀಡುತ್ತಿಲ್ಲ ಎಂದು ಅವರು ಆರೋಪಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ರಾಜೇಶ ಮಾಜಾಳಿಕರ, ಕಾರ್ಯದರ್ಶಿಗಳಾದ ಮೈಕಲ್ ಆಳ್ವಾರಿಸ್, ವಿಲ್ಸನ್ ಫರ್ನಾಂಡೀಸ್, ನಗರಸಭೆ ಸದಸ್ಯರಾದ ಸ್ನೇಹಲ್ ಹರಿಕಂತ್ರ ಮುಂತಾದವರು ಇದ್ದರು.