ಕಾರವಾರ: ಈ ಹಿಂದೆ ಮಡಗಾಂವ-ಮಂಗಳೂರು ನಡುವೆ ಸಂಚರಿಸುತ್ತಿದ್ದ ಡೆಮು ರೈಲನ್ನು ಇದೀಗ ಮೆಮು ಎಕ್ಸ್ಪ್ರೆಸ್ ಮಾಡಿ ಮೇಲ್ದರ್ಜೆಗೇರಿಸಿದ ನಂತರ ಉದ್ಭವವಾಗಿರುವ ಸಮಸ್ಯೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಅಂಕೋಲಾ ತಾಲೂಕಿನ ಹಾರವಾಡ ರೈಲು ನಿಲ್ದಾಣದಲ್ಲಿ ಸೋಮವಾರ ಕೆಲಕಾಲ ರೈಲು ತಡೆದು ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಜನಶಕ್ತಿ ವೇದಿಕೆ ಹಾಗೂ ಸಮಾನ ಮನಸ್ಕ ಸಂಘಟನೆಗಳು ಈ ರೈಲ್ ರೋಖೋ ಪ್ರತಿಭಟನೆ ಹಮ್ಮಿಕೊಂಡಿದ್ದು ಪದ್ಮಶ್ರೀ ಪುರಸ್ಕೃತರಾದ ಜಾನಪದ ಕಲಾವಿದೆ ಸುಕ್ರಿ ಗೌಡ, ವೃಕ್ಷಮಾತೆ ತುಳಸಿ ಗೌಡ ಹಾಗೂ ಮಾಜಿ ಶಾಸಕ ಸತೀಶ್ ಸೈಲ್ ಕೂಡ ಸಾಥ್ ನೀಡಿದರು. ಕಳೆದ ಎರಡು ವರ್ಷಗಳ ಹಿಂದಿನವರೆಗೆ ಸಂಚರಿಸುತ್ತಿದ್ದ ಡೆಮೊ ರೈಲು ದಕ್ಷಿಣ ಕನ್ನಡದಿಂದ ಗೋವಾದವರೆಗಿನ ಜನರು ಮತ್ತು ಪ್ರವಾಸಿಗರನ್ನು ಸಂಪರ್ಕಿಸುತ್ತಿತ್ತು. ಪ್ರಮುಖವಾಗಿ ಉತ್ತರಕನ್ನಡದಿಂದ ಉಡುಪಿ, ದಕ್ಷಿಣ ಕನ್ನಡದ ಆಸ್ಪತ್ರೆಗಳಿಗೆ ತೆರಳುವವರಿಗೆ, ಉದ್ಯೋಗಿಗಳಿಗೆ ಅನುಕೂಲಕರವಾಗಿತ್ತು. ಆದರೆ ಎರಡು ವರ್ಷಗಳ ಹಿಂದೆ ಕೋವಿಡ್ ನೆಪದಲ್ಲಿ ಪ್ರಯಾಣಿಕರಿಲ್ಲವೆಂದು ಡೆಮು ಸಂಚಾರ ಸ್ಥಗಿತಗೊಳಿಸಲಾಗಿತ್ತು.
ಕಳೆದ ವಾರವಷ್ಟೇ ಸಾರ್ವಜನಿಕರ ಒತ್ತಾಯದ ಮೇರೆಗೆ ಎರಡು ವರ್ಷಗಳ ಬಳಿಕ ಡೆಮು ಬದಲು ಇಲೆಕ್ಟ್ರಿಕ್ ಎಂಜಿನ್ನ ಮೆಮು ರೈಲಿನ ಸಂಚಾರ ಆರಂಭಿಸಿದೆ. ಬಳಿಕ ಸ್ಥಳಕ್ಕಾಗಮಿಸಿದ ಕೊಂಕಣ ರೈಲ್ವೆ ಪ್ರಾದೇಶಿಕ ವ್ಯವಸ್ಥಾಪಕ ಬಿ. ಬಿ. ನಿಕ್ಕಂ, ಪ್ರತಿಭಟನಾಕಾರರ ಬೇಡಿಕೆಗಳನ್ನ ಆಲಿಸಿದರು. ಈ ಬಗ್ಗೆ ಮನವಿ ಸ್ವೀಕರಿಸಿ, ೧೦ ದಿನಗಳಲ್ಲಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದು ರೈಲು ಸಾಗಲು ಪ್ರತಿಭಟನಾಕಾರರು ಅವಕಾಶ ಮಾಡಿಕೊಟ್ಟರು.
ಇದೇ ವೇಳೆ ಹಾರವಾಡ ರೈಲ್ವೆ ನಿಲ್ದಾಣದ ಫ್ಲಾಟ್ ಫಾರ್ಮ್ ಮೇಲ್ದರ್ಜೆಗೇರಿಸಲು ಕೂಡ ಒತ್ತಾಯಿಸಲಾಗಿದ್ದು, ಈ ಬಗ್ಗೆ ಕೂಡ ಆರ್ಆರ್ಎಂ ಕ್ರಮದ ಭರವಸೆ ನೀಡಿದರು. ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ, ರೈಲ್ವೇ ಸೇವಾ ಸಮಿತಿ ಕಾರ್ಯದರ್ಶಿ ರಾಜೀವ್ ಗಾಂವ್ಕರ್ ಸೇರಿದಂತೆ ಹಲವರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.