ಕಾರವಾರ: ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿಕೆಶಿಯವರು ಚುನಾವಣೆ ಸಮಯದಲ್ಲಿ ಬಿಜೆಪಿಯನ್ನು ಹೊಗಳುವುದು ಸಾಧ್ಯವಿದೆಯೇ? ಸಣ್ಣಪುಟ್ಟ ಟೀಕೆಗಳನ್ನು ಮಾಡುತ್ತಿದ್ದಾರೆ, ಪ್ರಜಾಪ್ರಭುತ್ವದಲ್ಲಿ ಇದು ಅನಿವಾರ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಗುಮೊಗದಿಂದ ಅವರ ಟೀಕೆಯನ್ನು ಸ್ವಾಗತ ಮಾಡುತ್ತೇವೆ. ಚುನಾವಣೆ ಹಿನ್ನಲೆ ಪ್ರಧಾನಿ ಮೋದಿ ಆಗಮಿಸಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷದಲ್ಲಿರುವಾಗ ಟೀಕೆ ಮಾಡುವುದು, ಸರ್ಕಾರದ ಕಿವಿ ಹಿಂಡುವ, ಸರ್ಕಾರದ ಮೇಲೆ ಆರೋಪ ಮಾಡುವ ಸಂಪ್ರದಾಯಗಳಿವೆ. ಅದನ್ನಷ್ಟೇ ಅವರು ಮಾಡುತ್ತಿದ್ದಾರೆ. ಹಾಗಾಗಿ ಇದಕ್ಕೆ ಗಂಭೀರವಾದ ಅರ್ಥ ಕಲ್ಪಿಸಬೇಕಾಗಿಲ್ಲ ಎಂದರು.
ಯತ್ನಾಳ್ ಹಾಗೂ ಇತರ ಸಚಿವರುಗಳ ನಡುವಿನ ಜಟಾಪಟಿಯ ಕುರಿತು ಮಾತನಾಡಿದ ಅವರು, ಒಂದೆರಡು ಸದಸ್ಯರಿರುವ ಮನೆಯಲ್ಲಿ ಇಂತಹ ಗೊಂದಲಗಳು ಇರುವುದಿಲ್ಲ. ದೊಡ್ಡ ಕುಟುಂಬದಲ್ಲಿ ಸಣ್ಣ ಸಣ್ಣ ಚರ್ಚೆಗಳು ಇರುವುದು ಸಹಜ. ರಾಜಕಾರಣದಲ್ಲಿ ಗುಡುಗು- ಸಿಡಿಲು ಇರುತ್ತೆ, ಕಡೆಗೆ ತೊಪ್ಪನೆ ಮಳೆ ಬರುತ್ತೆ, ಇದೆಲ್ಲ ರೂಢಿ ಸಂಪ್ರದಾಯಗಳು. ಯಾರಿಗೆ ಎಲ್ಲಿ, ಏನು ಹೇಳಬೇಕೋ ಅದನ್ನ ನಮ್ಮ ಹಿರಿಯರು ಹೇಳಿದ್ದಾರೆ. ಎಲ್ಲರೂ ಇಡೀ ಒಂದು ತಂಡವಾಗಿ ಕೆಲಸ ಮಾಡುತ್ತೇವೆ. ಗೆಲುವಿನ ಗುರಿಯೊಂದಿಗೆ ಮುನ್ನಡೆಯುತ್ತಿದ್ದೇವೆ, ನಾವೆಲ್ಲರೂ ಗೆಲ್ಲುತ್ತೇವೆ ಎಂದರು.
ಧಾರವಾಡಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, ಮುಸ್ಲಿಮರ ವಿಶ್ವಾಸ ಗಳಿಸಿ ಎಂಬ ಸಂದೇಶ ನೀಡಿದ್ದಾರಂತೆ ಎಂಬ ಪ್ರಶ್ನೆಗೆ, ಇಡೀ ದೇಶ ಒಂದಾಗಿ, ಒಟ್ಟಾಗಿ ಸಾಗಬೇಕು. ದೇಶ ನನ್ನದು, ರಾಷ್ಟ್ರ ಮೊದಲು ಎನ್ನುವ ಕಲ್ಪನೆಗೆ ಗೌರವ ಹಾಗೂ ಒತ್ತು ಕೊಡಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿಯವರ ಕಲ್ಪನೆ. ಅವರು ಚುನಾವಣೆಯ ಉದ್ದೇಶದಿಂದ ಯಾವುದನ್ನೂ ಹೇಳಿಲ್ಲ. ರಾಷ್ಟ್ರೀಯತೆಯ ದೃಷ್ಟಿಯಿಂದ ಹೇಳಿದ್ದಾರೆ. ನಮ್ಮ ಮುಂದಿರುವುದೇ ಹಿಂದುತ್ವ. ಹಿಂದುತ್ವ ಕೇವಲ ಒಂದು ಜಾತಿ, ವರ್ಗ, ಧರ್ಮಕ್ಕೆ ಸೀಮಿತವಾಗಿಲ್ಲ. ಇಡೀ ಭಾರತವೇ ಹಿಂದುತ್ವದ ಆಧಾರದ ಮೇಲೆ ನಡೆಯುತ್ತಿದ್ದು, ಅದನ್ನು ಬೆಂಬಲಿಸುವ ಎಲ್ಲರನ್ನೂ ಗೌರವಿಸಿ, ಪ್ರೀತಿಸಬೇಕು ಎಂದರು.ನಾವು ಈಗ ಅಲ್ಪಸಂಖ್ಯಾತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ತ್ರಿವಳಿ ತಲಾಖ್ ಪ್ರಕರಣವನ್ನು ರದ್ದು ಮಾಡಿದ್ದು ನಮ್ಮ ಕೇಂದ್ರ ಸರ್ಕಾರ. ಶಹಬಾನು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆಕೆಯ ಪರವಾಗಿ ತೀರ್ಪು ನೀಡಿತ್ತು. ಅಂದಿನ ಕೇಂದ್ರ ಸರ್ಕಾರ ಸಂವಿಧಾನವನ್ನೇ ತಿದ್ದುಪಡಿ ಮಾಡಿ ತ್ರಿವಳಿ ತಲಾಖ್ಗೆ ಅವಕಾಶ ನೀಡಲಾಗಿತ್ತು. ಈಗ ಯಾರು ಮತ ಹಾಕುತ್ತಾರೋ, ಬಿಡುತ್ತಾರೋ, ಅಂದು ಶಹಬಾನು ಪ್ರಕರಣದಲ್ಲಿ ಹೆಣ್ಣುಮಗಳ ಸಂಕಟವನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿಗಳು ತ್ರಿವಳಿ ತಲಾಖ್ ರದ್ದು ಮಾಡಿ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಿಗೆ ಬದುಕು ಕಟ್ಟಿಕೊಡುವ ಕೆಲಸ ಮಾಡಿದ್ದಾರೆ ಎಂದರು.
ಆರ್ಟಿಕಲ್ 370 ರದ್ದಾಗಿರುವುದು ರಾಷ್ಟ್ರ ಒಟ್ಟಾಗಬೇಕು ಎಂದು. ಭಾರತ ಜೋಡೋ ಮಾಡುತ್ತಿದ್ದವರಿಗೆ ಭಾರತವನ್ನ ಒಡೆದವರು ಯಾರು, ಜೋಡಿಸಿದವರು ಯಾರು ಎಂದು ಕೇಳಬೇಕು. ಕಾಶ್ಮೀರ ಭಾರದತ ಒಂದು ಭಾಗವಾಗಿತ್ತೇ ಹೊರತು ಅಲ್ಲಿ ಭಾರತದ ಪೂರ್ಣ ಅಧಿಕಾರ ಇರಲಿಲ್ಲ. 370 ರದ್ದು ಮಾಡಿ ಕಾಶ್ಮೀರವನ್ನು ಭಾರತಕ್ಕೆ ಸೇರಿಸಿದ್ದು ಜೋಡಿಸಿದವರು. ಜೋಡಿಸಬೇಕು ಎಂದು ಓಡಾಡುತ್ತಿರುವವರಿಗೆ ಯಾಕೆ ಎಂದು ಗೊತ್ತಿರದ ಕಾರಣ ಅವರ ಬಗ್ಗೆ ನಮ್ಮ ಚರ್ಚೆ ಇಲ್ಲ. ನಮ್ಮ ಸರ್ಕಾರ ಬುರವ ಮುನ್ನ ಕಾಶ್ಮೀರದಲ್ಲಿ ಭಯೋತ್ಪಾದಕರು ಅಡ್ಡಾಡುತ್ತಿದ್ದರು. ನಮ್ಮ ಸರ್ಕಾರ ಬಂದ ಮೇಲೆ ಅಲ್ಲಿನ ಸರ್ಕಾರಿ ಕಚೇರಿಗಳ ಮೇಲೆ ತ್ರಿವರ್ಣ ಧ್ವಜ ದಿನನಿತ್ಯ ಹಾರಾಡುತ್ತದೆ. ಇದು ರಾಷ್ಟ್ರೀಯತೆಯ ವಿಚಾರವಾಗಿದ್ದು, ಕೆಲವರಿಗೆ ಅರ್ಥ ಆಗುವುದಿಲ್ಲ ಎಂದರು.