ಕಾರವಾರ: ಬೈತಖೋಲದ ಭೂದೇವಿ ಗುಡ್ಡ ಅಗೆದು ಕಾನೂನು ಬಾಹಿರವಾಗಿ ರಸ್ತೆ ನಿರ್ಮಾಣ ಮಾಡುತ್ತಿರುವ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಾಜಿ ಶಾಸಕ ಸತೀಶ ಸೈಲ್ ಹೇಳಿದ್ದಾರೆ.
ನಗರದ ಬೈತಖೋಲದ ಭೂದೇವಿ ದೇವಸ್ಥಾನದ ಬಳಿ ನಡೆದ ಸಭೆಯಲ್ಲಿ (meetinig) ಮಾತನಾಡಿದ ಅವರು ಬೈತಖೋಲ ಗುಡ್ಡದಲ್ಲಿ ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಈ ಬಗ್ಗೆ ಗಣಿ ಇಲಾಖೆಯವರು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೈಲ್ ಆಗ್ರಹಿಸಿದ್ದಾರೆ.
ಬೈತಖೋಲದಲ್ಲಿ ನೌಕಾನೆಲೆಯವರು ರಸ್ತೆ ನಿರ್ಮಾಣ ಮಾಡುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು ಜ. ೨೬ ಕ್ಕೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳುವದಾಗಿ ತಿಳಿಸಿದ್ದಾರೆ.
ಅಲ್ಲಿಯವರೆಗೆ ಕಾದು ನೋಡೊಣ. ಈಗಾಗಲೇ ನೌಕಾನೆಲೆಗಾಗಿ ೪ ಸಾವಿರ ಹೆಕ್ಟೇರಗಿಂತ ಹೆಚ್ಚಿನ ಜಾಗವನ್ನು ತ್ಯಾಗ ಮಾಡಿದ್ದೆವೆ. ಕದ್ರಾ ಅಣೆಕಟ್ಟು, ಕೈಗಾ ಅಣುವಿದ್ಯುತ್ ನಿಗಮ, ಸೀಬರ್ಡ ಯೋಜನೆ, ವಿಮಾನ ನಿಲ್ದಾಣ ಕೊಂಕಣ ರೈಲ್ವೆ ಸೇರಿದಂತೆ ಅನೇಕ ಯೋಜನೆಗಳಿಗಾಗಿ ನಮ್ಮವರು ಮತ್ತೆ-ಮತ್ತೆ ತ್ಯಾಗ ಮಾಡುತ್ತಲೆ ಬಂದಿದ್ದಾರೆ. ಈಗ ಮತ್ತೆ ತ್ಯಾಗ ಮಾಡಿ ನಿರಾಶ್ರಿತರಾಗುವುದು ಸಾಧ್ಯವಿಲ್ಲ. ಭೂದೇವಿ ಗುಡ್ಡದಲ್ಲಿ ರಸ್ತೆ ನಿರ್ಮಾಣ ಮಾಡುವದರಿಂದ ಭವಿಷ್ಯದಲ್ಲಿ ಭೂಕುಸಿತವಾಗುವ ಸಾಧ್ಯತೆ ಇದೆ.
ಆದ್ದರಿಂದ ಯಾವುದೇ ಕಾರಣಕ್ಕೆ ರಸ್ತೆ ಕಾಮಗಾರಿಗೆ ಅವಕಾಶ ನೀಡಬಾರದು. ಭೂದೇವಿ ಗುಡ್ಡದಲ್ಲಿ ಸೀಬರ್ಡನವರು ತಮ್ಮ ಜಾಗ ಎಂದು ರಸ್ತೆ ಕಾಮಗಾರಿಗೆ ಮುಂದಾಗಿದ್ದಾರೆ. ಆದರೆ ಪಹಣಿ ಪತ್ರದಲ್ಲಿ ಸರ್ವೆ ನಂ. ೧೬ ಮತ್ತು ೩೩ ಸರಕಾರಿ ಫಾರೆಸ್ಟ್ ಅಂತ ಇದ್ದು, ಬಂದರು ಇಲಾಖೆ ಎಂದು ತೋರಿಸುತ್ತಿದೆ. ಈಗಾಗಲೇ ಉಸ್ತುವಾರಿ ಸಚಿವರು ಕಿಂಡಿ ಅಣೆಕಟ್ಟು ಸ್ಥಳೀಯರಿಗೆ ಬೇಡವಾದರೆ ಮಾಡುವದಿಲ್ಲ ಎಂದು ಭರವಸೆ ನೀಡಿದ್ದು, ಬೈತಖೋಲದ ಭೂದೇವಿ ಗುಡ್ಡದಲ್ಲೂ ರಸ್ತೆ ಕಾಮಗಾರಿ ಸ್ಥಳೀಯರಿಗೆ ಬೇಡವಾಗಿದ್ದು, ಅದಕ್ಕೆ ಅವಕಾಶ ನೀಡಬಾರದು ಸದ್ಯ ಉಸ್ತುವಾರಿ ಸಚಿವರು ಜ. ೨೬ ರಂದು ಕೈಗೊಳ್ಳುವ ನಿರ್ಧಾರಕ್ಕಾಗಿ ಕಾಯಲಾಗುತ್ತಿದ್ದು, ತದನಂತರ ಸ್ಥಳೀಯರೊಂದಿಗೆ ಚರ್ಚಿಸಿ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು.
ಸೀಬರ್ಡ್ ಯೋಜನೆಗಾಗಿ ತ್ಯಾಗ ಮಾಡಿದವರಿಗೆ ೩ ದಶಕಗಳು ಕಳೆದರೂ ನ್ಯಾಯ ಸಿಕ್ಕಿಲ್ಲ. ಈಗಲೂ ಪರಿಹಾರಕ್ಕಾಗಿ ಅಲೆದಾಡುವಂತಾಗಿದೆ. ಆದ್ದರಿಂದ ಸೀಬರ್ಡನವರಿಗೆ ಮತ್ತೆ ಜಾಗ ಬಿಟ್ಟುಕೊಡುವ ಪ್ರಶ್ನೆಯೆ ಇಲ್ಲ. ಲೇಡಿಸ್ ಬೀಚ್ ಸಹ ಸ್ಥಳೀಯರದ್ದಾಗಿದ್ದು, ಭೂದೇವಿ ಗುಡ್ಡದಲ್ಲಿ ರಸ್ತೆ ಕಾಮಗಾರಿಗೆ ಆಸ್ಪದ ನೀಡಬಾರದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉತ್ತರ ಕನ್ನಡ ಸಹಕಾರಿ ಮೀನು ಮಾರಾಟ ಫೆಡರೇಶನದ ಅಧ್ಯಕ್ಷ ರಾಜು ತಾಂಡೇಲ್, ಕಾಂಗ್ರೆಸ್ ಮುಖಂಡ ಶಂಭು ಶೆಟ್ಟಿ, ನಗರಸಭಾ ಸದಸ್ಯರಾದ ಮುನ್ನಾ ರೇವಂಡಿಕರ, ಸ್ನೇಹಲ ಹರಿಕಂತ್ರ, ಸುವಿಧಾ ಉಳ್ವೇಕರ, ಶ್ವೇತಾ ನಾಯ್ಕ, ರಾಜೇಶ ಮಾಜಾಳಿಕರ, ಸ್ಥಳೀಯ ಮುಖಂಡರಾದ ಛಾಯಾ ಜಾವಕರ, ಚೇತನ ಹರಿಕಂತ್ರ, ವಿಲ್ಸನ್ ಫರ್ನಾಂಡಿಸ್, ಪ್ರಶಾಂತ ಹರಿಕಂತ್ರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.