News Kannada
Thursday, June 01 2023
ಉತ್ತರಕನ್ನಡ

ಗೋಕರ್ಣ: ಜನಮನ ಸೆಳೆದ ಪಾಕವೈಭವ- ಇಂದು ಸೇವಾಸೌಧ ಸಮರ್ಪಣೆ

Gokarna: Seva Soudha dedicated today
Photo Credit : News Kannada

ಗೋಕರ್ಣ: ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿಯವರ ದೇವತೋಪಾಸನೆ, ತಪಸ್ಸು, ಸಚ್ಚಿಂತನೆ, ಕಾರ್ಯಾನ್ವಯದ ಉದ್ದೇಶದಿಂದ ಶಿಷ್ಯಭಕ್ತರು ಸುಮಾರು ಐದು ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಅಶೋಕೆಯಲ್ಲಿ ನಿರ್ಮಿಸಿರುವ ವಿಶಿಷ್ಟ ‘ಸೇವಾಸೌಧ’ ಸಮರ್ಪಣಾ ಸಮಾರಂಭ ಶನಿವಾರ (ಜನವರಿ 28) ನಡೆಯಲಿದೆ.

ಸ್ವಸ್ಥ ಮತ್ತು ಸಮರ್ಥ ಜಗತ್ತಿನ ನಿರ್ಮಾಣಕ್ಕೆ ಸುಯೋಗ್ಯ ಶಿಕ್ಷಣದ ಅಗತ್ಯತೆಯನ್ನು ಪರಿಕಲ್ಪಿಸಿ, ಭಾರತದ ಪ್ರಾಚೀನ ಶಿಕ್ಷಣ ವಿನ್ಯಾಸ ಹಾಗೂ ಶಿಕ್ಷಣಕ್ರಮಕ್ಕೆ ಕಾಯಕಲ್ಪ ಒದಗಿಸಬೇಕು ಎಂಬ ಮಹದಾಶಯದೊಂದಿಗೆ ಪರಮಪೂಜ್ಯರು ಅನುಷ್ಠಾನಗೊಳಿಸುತ್ತಿರುವ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠಮ್‍ನ ಕುಲಾಧಿಪತಿಗಳಾದ ಶ್ರೀ ರಾಘವೇಶ್ವರ ಭಾರತೀಸ್ವಾಮೀಜಿಯವರ ವಸತಿಗಾಗಿ ಈ ವಿಶಿಷ್ಟ ಭವನ ನಿರ್ಮಿಸಲಾಗಿದೆ.

ಇದರ ಅಂಗವಾಗಿ ಮೂರು ದಿನಗಳಿಂದ ನಡೆಯುತ್ತಿರುವ ವೈವಿಧ್ಯಮಯ ಕಾರ್ಯಕ್ರಮಗಳು ಶನಿವಾರ ಸಂಪನ್ನಗೊಳ್ಳಲಿವೆ. ರಾಘವೇಶ್ವರಭಾರತೀ ಶ್ರೀಗಳ ಸಾನ್ನಿಧ್ಯದಲ್ಲಿ ಮಧ್ಯಾಹ್ನ 12 ಗಂಟೆಗೆ ನಡೆಯುವ ಸಮರ್ಪಣಾ ಸಮಾರಂಭದಲ್ಲಿ ಕೊಯಮತ್ತೂರಿನ ಶ್ರೀಚಂದ್ರಶೇಖರಭಾರತೀ ಚಂದ್ರಶೇಖರ ಸರಸ್ವತಿ ವೇದಪಾಠಶಾಲೆಯ ಮುಖ್ಯಸ್ಥರಾದ ವೇದಬ್ರಹ್ಮ ಶ್ರೀ ಜಂಬೂನಾಥ ಘನಪಾಠಿಗಳು, ತಿರುವನಂತಪುರಂ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ವೇದಬ್ರಹ್ಮ ಶ್ರೀ ನಾರಾಯಣ ಪಟ್ಟೇರಿ, ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಟಿಟಿಡಿ ಮಂಡಳಿ ಅಧ್ಯಕ್ಷ ವೈ,ವಿ.ಸುಬ್ಬಾರೆಡ್ಡಿ ಸೇರಿದಂತೆ ಗಣ್ಯಾತಿಗಣ್ಯರು ಭಾಗವಹಿಸುವರು ಎಂದು ಶ್ರೀಮಠದ ಲೋಕಸಂಪರ್ಕಾಧಿಕಾರಿ ಹರಿಪ್ರಸಾದ್ ಪೆರಿಯಾಪು ವಿವರ ನೀಡಿದ್ದಾರೆ.

ರಾಜ್ಯ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಅನಂತ ಕುಮಾರ್ ಹೆಗಡೆ, ಗೃಹ ಸಚಿವ ಅರಗ ಜ್ಞಾನೇಂದ್ರ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಶಿವರಾಮ ಹೆಬ್ಬಾರ್, ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ದಿನಕರ ಶೆಟ್ಟಿ, ಸುನೀಲ್ ನಾಯಕ್, ರೂಪಾಯಿ ನಾಯಕ್ ಮತ್ತಿತರ ಗಣ್ಯರು ಈ ಅಪೂರ್ವ ಸಮಾರಂಭಕ್ಕೆ ಸಾಕ್ಷಿಗಳಾಗಲಿದ್ದಾರೆ.

ವಿಶಿಷ್ಟ ಭವನ
ಸಂಪೂರ್ಣ ಸಾಂಪ್ರದಾಯಿಕ ಶೈಲಿಯಲ್ಲಿ ಸಿಮೆಂಟ್, ಇಟ್ಟಿಗೆ ಬಳಸದೇ ವಿಶಿಷ್ಟವಾಗಿ ನಿರ್ಮಿಸಿದ ಈ ಭವ್ಯ ಭವನದ ಸಮರ್ಪಣಾ ಸಮಾರಂಭಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಮಂದಿ ಭಕ್ತರು ಆಗಮಿಸಲಿದ್ದಾರೆ.

ಶ್ರೀಮಠದ ಸೇವಾಬಿಂದುಗಳ ಸಮರ್ಪಣೆಯಲ್ಲಿ ನಿರ್ಮಾಣಗೊಂಡ ಭಾರತೀಯ ವಾಸ್ತುಶಿಲ್ಪ ವಿನ್ಯಾಸಗಳಲ್ಲಿ ಕಂಗೊಳಿಸುವ ಆವರಣವನ್ನು ಆಮೂಲಾಗ್ರವಾಗಿ ಅಲಂಕರಿಸಲಿರುವ ಭಾರತೀಯ ಮೂಲದ ಗಿಡ-ಮರ-ಬಳ್ಳಿಗಳಿಂದ ಈ ಭವ್ಯ ಮಂದಿರ ಶೋಭಿಸುತ್ತಿದೆ.

ಪಾಕವೈಭವ
ಈ ಭವ್ಯ ಕಾರ್ಯಕ್ರಮಕ್ಕಾಗಿ ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠದಿಂದ ಆಗಮಿಸಿದ 15 ಕ್ವಿಂಟಲ್ ಅಕ್ಕಿ, 2000 ತೆಂಗಿನಕಾಯಿ, 18 ಚೀಲ ಚೀನಿಕಾಯಿ, 12 ಚೀಲ ಕುಂಬಳಕಾಯಿ, 2 ಚೀಲ ಆಲೂಗಡ್ಡೆ, 2 ಚೀಲ ಬೀನ್ಸ್ ಸೇರಿದಂತೆ ಸುವಸ್ತುಗಳನ್ನೊಳಗೊಂಡ ಹಸಿರುವಾಣಿ ಹೊರೆಕಾಣಿಕೆಯನ್ನು ಈ ಸಂದರ್ಭದಲ್ಲಿ ಸಮರ್ಪಿಸಲಾಯಿತು.

ಇದರ ಅಂಗವಾಗಿ ಕ್ಷೇತ್ರದ ಅಧಿದೇವತೆ ಶ್ರೀ ಚಂದ್ರಮೌಳೀಶ್ವರ ದೇವರಿಗೆ ಅಷ್ಟೋತ್ತರ ಶತ ವಿಶೇಷ ದ್ರವ್ಯಗಳಿಂದ ಅಭಿಷೇಕ ಸೇವೆ ಮತ್ತು ಸಾಂಪ್ರದಾಯಿಕ ಪಾಕವೈಭವವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

See also  ಶಿವಮೊಗ್ಗ: ಹತ್ಯೆಗೀಡಾದ ಬಜರಂಗದಳ ಕಾರ್ಯಕರ್ತನ ಕುಟುಂಬಕ್ಕೆ ದುಷ್ಕರ್ಮಿಗಳಿಂದ ಬೆದರಿಕೆ

ತೊಡದೇವು, ಮಜ್ಜಿಗೆ ದೋಸೆ, ವಡೆ, ಬಜೆ/ಪೋಡಿ, ದೇಸಿ ಹಾಲಿನ ಕುಲ್ಫಿ, ಚಕ್ಕುಲಿ, ಚಾಟ್ಸ್, ಕರ್ಜಿಕಾಯಿ, ಬಾಳ್ಕ, ಉಪ್ಪುಸೊಳೆ ರೊಟ್ಟಿ, ಬಾಳೆಹಣ್ಣು ಒತ್ತುಶ್ಯಾವಿಗೆ, ಕೊಟ್ಟೆ ಕಡುಬು, ವಡಪೆ, ಅಕ್ಕಿ ಒತ್ತುಶ್ಯಾವಿಗೆ, ಉಂಡೆಗಳು, ಚಿಪ್ಸ್, ಬಾಳೆಹಣ್ಣಿನ ಹಲ್ವ, ಹಪ್ಪಳ, ಅಕ್ಕಿವಡೆ, ಓಡುಪ್ಪಾಳೆ, ಗೆಣಸಲೆ, ಹೋಲಿಗೆ ಪತ್ರೋಡೆ, ಅತ್ರಾಸ, ಉಂಡ್ಳಕಾಳು, ತೆಂಗೊಳಲು, ಉಸುಲಿ, ಕೋಸಂಬರಿ, ಹವ್ಯಕ ಪೇಯಗಳಾದ ಅಪ್ಪೆಹುಳಿ, ಬಾಳೆದಿಂಡು ಸೂಪ್ ಮತ್ತಿತರ ತಿಂಡಿ ತಿನಸುಗಳ ಪ್ರಾತ್ಯಕ್ಷಿಕೆ ಮತ್ತು ಮಾರಾಟ ಮೇಳದಲ್ಲಿ ಸಾವಿರಾರು ಮಂದಿ ಪಾಲ್ಗೊಂಡರು. ಕೈಮಗ್ಗ, ಕರಕುಶಲ ವಸ್ತುಗಳ ಪ್ರದರ್ಶನ- ಮಾರಾಟವೂ ನಡೆಯಿತು.

ಹವ್ಯಕ ಸಂಸ್ಕೃತಿಯ ಅವಿಭಾಜ್ಯ ಅಂಗವಾದ ವಿಶಿಷ್ಟ ಭಕ್ಷ್ಯ ಭೋಜ್ಯಗಳ ಪ್ರದರ್ಶನ ಮತ್ತು ಮಾರಾಟದ ವಿಶಿಷ್ಟ ಆಹಾರೋತ್ಸವ ಜನಮನ ಸೂರೆಗೊಂಡಿತು. ಹವ್ಯಕ ಪಾಕಶೈಲಿಯಲ್ಲಿ ವಿಶಿಷ್ಟಾತಿವಿಶಿಷ್ಟ ಹಾಗೂ ಅಪರೂಪದ ತಿನಸುಗಳನ್ನು ಸಾರ್ವಜನಿಕರು ಆಸ್ವಾದಿಸಿದರು.

ಧಾರ್ಮಿಕ- ಸಾಂಸ್ಕೃತಿಕ ಕಾರ್ಯಕ್ರಮ
ಅಗಸ್ತ್ಯರಿಂದ ಪೂಜಿತವಾದ, ವರದ ಮುನಿಗಳು ನೀಡಿದ ಅಶೋಕೆಯಲ್ಲಿ ಶ್ರೀ ಶಂಕರಾಚಾರ್ಯರಿಂದ ಅನುಗ್ರಹಿಸಲ್ಪಟ್ಟ, ವೀರಪರಂಪರೆಯ ಎಲ್ಲ ಪೀಠಾಧಿಪತಿಗಳಿಂದ ಪ್ರತಿದಿನ ಸೇವೆ ಸ್ವೀಕರಿಸುತ್ತಿರುವ ಶ್ರೀರಾಮದೇವರಿಗೆ ಅಶೋಕೆಯಲ್ಲಿ ಪ್ರಥಮ ಬಾರಿಗೆ ಸಾಮ್ರಾಜ್ಯ ಪಟ್ಟಾಭಿಷೇಕವನ್ನೂ ನೆರವೇರಿಸಲಾಯಿತು. ಶ್ರೀಕರಾರ್ಚಿತ ಶ್ರೀಚಂದ್ರಮೌಳೀಶ್ವರ ದೇವರಿಗೆ 56 ಭಕ್ಷ್ಯಗಳ ನೈವೇದ್ಯ ಮತ್ತು 108 ದ್ರವ್ಯಗಳಿಂದ ವಿಶೇಷ ಅಭಿಷೇಕ ಮೆರವೇರಿತು.

ನಾಲ್ಕು ಗಿನಿಸ್ ದಾಖಲೆಗಳ ವೀರ, ಮೃದಂಗ ಮಾಂತ್ರಿಕ ಡಾ.ಕುನ್ನಂಕುಳಂ ಡಾ.ರಾಮಕೃಷ್ಣನ್ ಮತ್ತು ಯೋಗೀಶ್ ಶರ್ಮಾ ಅವರ ಸಂಗೀತ ಕಾರ್ಯಕ್ರಮವೂ ಇರುತ್ತದೆ. ಅನೂಪ್ (ವಯಲಿನ್), ಗೋವಿಂದ ಪ್ರಸಾದ್, ಉಣ್ಣಿಕೃಷ್ಣನ್ ಕಾಸರಗೋಡು ಜಿಲ್ಲೆ ಪೆರಿಯಾ ನಾಗರತ್ನ ಹೆಬ್ಬಾರ್ ಮತ್ತು ತಂಡದಿಂದ ಭಜನಾ ಕಾರ್ಯಕ್ರಮ, ಕುಮಾರಿ ರಚಿತಾ ತಂಡದಿಂದ ಭರತನಾಟ್ಯ ವೈಭವ ನಡೆಯಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು