ಕಾರವಾರ: ನಿರ್ವಾಹಕರೊಬ್ಬರು ಅತಿರೇಕದ ವರ್ತನೆ ತೋರಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯೋರ್ವಳು ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆದಿದೆ.
ಮುದಗಾದಿಂದ ಕಾರವಾರಕ್ಕೆ ಬರುವ ಬಸ್ಸಿನಲ್ಲಿ ನಗರದಲ್ಲಿ ಕಾಲೇಜೊಂದರಲ್ಲಿ ಪಿಯು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯೋರ್ವಳು ಐಸ್ಪ್ಲಾಟ್ ಚೆಂಡಿಯಾ ಬಳಿ ಬಸ್ ಹತ್ತಿದ್ದಾಳೆ. ಬಸ್ ಹತ್ತಿದ ಸಂದರ್ಭದಲ್ಲಿ ನಿರ್ವಾಹಕರು ಮುಂದೆ ಹೋಗುವಂತೆ ದೂಡಿದ್ದಾರೆ. ನಿರ್ವಾಹಕರು ದೂಡಿದ್ದರಿಂದ ವಿದ್ಯಾರ್ಥಿನಿ ಮುಂದಕ್ಕೆ ಮುಗ್ಗರಿಸಿದ್ದಾಳೆ. ಈ ಸಂದರ್ಭದಲ್ಲಿ ಅವರ ಐಡಿ ಕಾರ್ಡ್ ಸಹ ಕೆಳಗೆ ಬಿದ್ದಿದೆ. ಇನ್ನೇನು ನಿಯಂತ್ರಣ ಮಾಡದಿದ್ದರೆ ಬಸ್ಸಿನಲ್ಲಿ ಬಿಳುವ ಸಂದರ್ಭ ಇತ್ತು. ಈ ಘಟನೆ ವಿದ್ಯಾರ್ಥಿನಿಗೆ ಮುಜುಗರ ತಂದಿತು. ಬಸ್ ನಿಲ್ದಾಣಕ್ಕೆ ಬಂದ ಬಳಿಕ ವಿದ್ಯಾರ್ಥಿನಿ ಬಸ್ಸಿನಲ್ಲಿ ನಡೆದ ಘಟನೆಯ ಕುರಿತು ನಿರ್ವಾಹಕನನ್ನು ಪ್ರಶ್ನಿಸಿದ್ದಾಳೆ. ಈ ಸಂದರ್ಭದಲ್ಲಿ ನಿರ್ವಾಹಕ ವಿದ್ಯಾರ್ಥಿನಿಯ ಮನವಿಯನ್ನು ಸರಿಯಾಗಿ ಆಲಿಸದೆ ಅತಿರೇಕದಿಂದ ಮಾತನಾಡಿದ್ದಾರೆ.
ನಿರ್ವಾಹಕರ ಈ ಮಾತುಗಳಿಂದ ವಿದ್ಯಾರ್ಥಿ ನೊಂದು ತನ್ನ ಸಹಪಾಠಿಗಳು ಮತ್ತು ವಿದ್ಯಾರ್ಥಿ ಒಕ್ಕೂಟದ ಮುಖಂಡ ರಾಘು ನಾಯ್ಕ ಅವರಿಗೆ ಕರೆ ಮಾಡಿದ್ದಾಳೆ. ಸ್ಥಳಕ್ಕೆ ಬಂದ ರಾಘು ನಾಯ್ಕ ಅವರು ನಡೆದ ಘಟನೆಯ ಬಗ್ಗೆ ನಿರ್ವಾಹಕರ ಬಳಿ ಪ್ರಶ್ನಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ನಿರ್ವಾಹಕರ ಮಧ್ಯೆ ವಾಗ್ವಾದ ನಡೆಯಿತು. ನಡೆದ ಘಟನೆಯ ಬಗ್ಗೆ ನಿರ್ವಾಹಕರು ಕ್ಷಮೆ ಕೇಳಿದ ನಂತರ ವಿದ್ಯಾರ್ಥಿಗಳು ಅಲ್ಲಿಂದ ತೆರಳಿದರು.