ಕಾರವಾರ: ಪಕ್ಷಾತೀತವಾಗಿ ನಡೆಸಬೇಕಾದ ಕದಂಬೋತ್ಸವವನ್ನು ಬಿಜೆಪಿ ಪಕ್ಷದ ಉತ್ಸವವನ್ನಾಗಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ ಆಗಮಿಸುತ್ತಿದ್ದ ರಸ್ತೆಯಲ್ಲಿಯೇ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಪರಿಣಾಮ ಕೆಲ ನಿಮಿಷ ಸಿಎಂ ಸಂಚಾರಕ್ಕೆ ಅಡ್ಡಿಯಾದ ಘಟನೆ ಬನವಾಸಿಯಲ್ಲಿ ನಡೆದಿದೆ.
ಬನವಾಸಿಯಲ್ಲಿ ಆಯೋಜಿಸಲಾಗಿರುವ ಕದಂಬೋತ್ಸವ ಹಾಗೂ ಕೆರೆ ತುಂಬಿಸುವ ಯೋಜನೆ ಉದ್ಘಾಟನೆಗೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸುತ್ತಿದ್ದ ವೇಳೆ ಅದೇ ಮಾರ್ಗದ ರಸ್ತೆಯಲ್ಲಿಯೇ ವಿಎಸ್ ಪಾಟೀಲ್ ನೇತೃತ್ವದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಘೋಷಣೆ ಕೂಗಿದರು.
ಕದಂಬೋತ್ಸವವನ್ನು ಬಿಜೆಪಿ ಪಕ್ಷದ ಉತ್ಸವವನ್ನಾಗಿ ಮಾಡಲಾಗುತ್ತಿದೆ. ಕೇವಲ ಪಕ್ಷದ ಕಾರ್ಯಕರ್ತರನ್ನು ಆಹ್ವಾನಿಸಿ ಮಾಡಲಾಗುತ್ತಿದೆ. ಸಚಿವರು ಬಿಜೆಪಿ ಚಿಹ್ನೆಯಿರುವ ಟೀ ಸರ್ಟ್ ಹಂಚಿ ಪಕ್ಷದ ಉತ್ಸವ ಮಾಡುತ್ತಿದ್ದಾರೆ. ಕೆರೆ ತುಂಬಿಸುವ ಯೋಜನೆಗೆ ಈ ಹಿಂದೆ ಸಿದ್ದರಾಮಯ್ಯ ಅವರು ಅನುದಾನ ಒದಗಿಸಿದ್ದರು. ಆದರೆ ಇದೀಗ ಕರೆಂಟ್ ಹಾಗೂ ನೀರಿಲ್ಲದೆ ಇದ್ದರೂ ಏತನೀರಾವರಿ ಯೋಜನೆ ಉದ್ಘಾಟನೆ ಮಾಡಲಾಗುತ್ತಿದೆ. ಯೋಜನೆಯನ್ನು ಸಿಎಂ ಉದ್ಘಾಟನೆ ಮಾಡಿ ಅದರ ಕ್ರೆಡಿಟ್ ಪಡೆಯಲು ಶಿವರಾಮ್ ಹೆಬ್ಬಾರ್ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.