ಕಾರವಾರ: ಹೆಜ್ಜೇನು ದಾಳಿಗೆ ಐವತ್ತಕ್ಕೂ ಹೆಚ್ಚು ಶಿಬಿರಾರ್ಥಿಗಳು ಅಸ್ವಸ್ಥಗೊಂಡ ಘಟನೆ ಮುಂಡಗೋಡಿನಲ್ಲಿ ಟಿಬೆಟಿಯನ್ ಕ್ಯಾಂಪ್ ಬಳಿ ನಡೆದಿದೆ.
ಮುಂಡಗೋಡಿನ ಟಿಬೇಟಿಯನ್ ಕ್ಯಾಂಪ್‌ನ ಶಿಬಿರಕ್ಕೆ ಬಂದ ದಲಿತ ಸಂಘರ್ಷ ಸಮಿತಿಯ ರಾಜ್ಯ ಮಟ್ಟದ ಪದಾಧಿಕಾರಿಗಳು ಗಾಯಗೊಂಡಿದ್ದಾರೆ. ಟಿಬೇಟಿಯನ್ ಕ್ಯಾಂಪ್‌ನಲ್ಲಿ ದಲಿತ ಸಂಘರ್ಷ ಸಮಿತಿಯು ಮಾರ್ಚ್ 3 ಹಾಗೂ 4ರಂದು ಎರಡು ದಿನಗಳ ಶಿಬಿರ ಹಮ್ಮಿಕೊಂಡಿತ್ತು. ರಾಜ್ಯದ ಪ್ರತಿ ಜಿಲ್ಲೆಯಿಂದ ಸಮಿತಿಯ 10 ಪದಾಧಿಕಾರಿಗಳು ಸೇರಿದಂತೆ 300ಕ್ಕೂ ಹೆಚ್ಚು ಜನರು ಶಿಬಿರದಲ್ಲಿ ಭಾಗವಹಿಸಿದ್ದರು. ಶನಿವಾರದ ಅಧ್ಯಯನ ಶಿಬಿರ ಆರಂಭ ಆಗುವ ವೇಳೆ ಹೆಜ್ಜೇನುಗಳು ಒಮ್ಮೆಲೇ ದಾಳಿ ನಡೆಸಿವೆ.
ಈ ವೇಳೆ ಐವತ್ತಕ್ಕೂ ಅಧಿಕ ಶಿಬಿರಾರ್ಥಿಗಳು ಗಾಯಗೊಂಡಿದ್ದು, ಅವರನ್ನು ಮುಂಡಗೋಡಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ರವಾನಿಸಲಾಗಿದೆ ಎಂದು ವರದಿಯಾಗಿದೆ.