ಕಾರವಾರ: ಮಹಿಳೆಯ ಅಭಿವೃದ್ಧಿ, ಬೆಳವಣಿಗೆ ನೋಡಲಾಗದೆ ಸಮಾಜದಲ್ಲಿ ಅನೇಕ ಜನರು ಹೊಟ್ಟೆ ಕಿಚ್ಚು ಪಡುತ್ತಿದ್ದಾರೆ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು. ನಗರದ ಮಿತ್ರ ಸಮಾಜ ಮೈದಾನದಲ್ಲಿ ಶುಕ್ರವಾರ ನಡೆದ ಮಹಿಳಾ ಮೋರ್ಚಾ ಸಮಾವೇಶದಲ್ಲಿ ಮಾತನಾಡಿದ ಅವರು, ಮಹಿಳೆ ರಾಜಕೀಯವಾಗಿ ಬೆಳೆದರೆ, ಆಕೆ ಅಭಿವೃದ್ಧಿ ಹೊಂದಿದರೆ ಕೆಲವರಿಗೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.
ಯಾವುದೇ ಕ್ಷೇತ್ರ ಇರಲಿ ಮಹಿಳೆ ಬೆಳೆದರೆ ಅವಳನ್ನು ಕ್ಷೀಣವಾಗಿ ನೋಡಲಾಗುತ್ತಿದೆ. ಅದರೆ, ಅವರಿಂದ ಯಾವುದೇ ಒಳ್ಳೆಯ ಕೆಲಸ ಆಗುವುದಿಲ್ಲ. ಯಾರೋ ಏನೋ ಹೇಳಿದರು ಎಂದು ಟೆನಶ್ಯನ್ ಮಾಡುವುದಕ್ಕಿಂತ ಒಂದು ಕಿವಿಯಿಂದ ಕೇಳಿ ಮತ್ತೊಂದು ಕಿವಿಯಿಂದ ಬಿಡಬೇಕು ಎಂದು ಮಹಿಳೆಯರಿಗೆ ಶಾಸಕರು ಕಿವಿಮಾತು ಹೇಳಿದರು.
ವಿರೋಧಿಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಮುಂದಿನ ಚುನಾವಣೆಯಲ್ಲಿ ಒಗ್ಗಟ್ಟಾಗಿ ದುಡಿಯೋಣ. ಹಣ, ಆಮಿಷಕ್ಕೆ ಬಲಿಯಾಗದೆ ನಾವು ಪಕ್ಷದ ಸಂಘಟನೆಗಾಗಿ ಕೆಲಸ ಮಾಡೋಣ, ಹಣ ಆಮಿಷಕ್ಕೆ ಬಲಿಯಾಗಿದ್ದಿದ್ದರೆ ನಾವಿಂದು ಇಲ್ಲಿ ಇರುತ್ತಿರಲಿಲ್ಲ ಎಂದು ಶಾಸಕರು ತಿಳಿಸಿದರು.
ಕಳೆದ 20 ವರ್ಷದಿಂದ ರಾಜಕೀಯದಲ್ಲಿದ್ದೇನೆ. ಚೆಂಡಿಯಾ ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ರಾಜಕೀಯ ಜೀವನ ಆರಂಭಿಸಿ, ತಾ.ಪಂ. ಸದಸ್ಯೆಯಾಗಿ, ಅಧ್ಯಕ್ಷೆಯಾಗಿ, ಬಿಜೆಪಿಯಲ್ಲಿ ರಾಜ್ಯ ಕಾರ್ಯಕಾರಣಿ ಸದಸ್ಯೆಯಾಗಿ, ಪ್ರಭಾರಿಯಾಗಿ ಕೆಲಸ ಮಾಡಿ ಇಂದು ಶಾಸಕಿಯಾಗಿದ್ದೇನೆ. ಇದು ನಿಮ್ಮೆಲ್ಲರ ಆಶೀರ್ವಾದದಿಂದ ಸಾಧ್ಯವಾಗಿದೆ ಎಂದರು.
ಗಂಭೀರ ಸಮಸ್ಯೆ ಎದುರಾದಾಗ, ಗೊಂದಲಗಳು ಆದಾಗ ಮಹಿಳೆಯರು ಪಡುವ ಕಷ್ಟಗಳು ಅಷ್ಟಿಷ್ಟಲ್ಲ. ರಾತ್ರಿ ಬೆಳಗಾಗುವವರೆಗೂ ಒತ್ತದಲ್ಲಿಯೇ ಕಾಲಕಳೆಯಬೇಕಾಗುತ್ತದೆ. ಕಷ್ಟಗಳನ್ನು ಮುಷ್ಠಿಯಲ್ಲಿ ಇಟ್ಟು ಮನೆಯ ಮರ್ಯಾದೆ ಕಾಪಾಡಿಕೊಳ್ಳಬೇಕಾಗುತ್ತದೆ. ಏನೆ ಕಷ್ಟಗಳು ಬಂದಾಗ ನಿಮ್ಮೊಂದಿಗೆ ನಾನಿದ್ದೇನೆ ಎನ್ನುವ ಅಭಯವನ್ನು ಶಾಸಕರು ನೀಡಿದರು.
ಕುಟುಂಬದ ರಕ್ಷಕರಾಗಿರುವ ಹೆಣ್ಣು ಮಕ್ಕಳು ಕೇಂದ್ರ ನರೇಂದ್ರ ಮೋದಿ ಸರ್ಕಾರ ಮತ್ತು ರಾಜ್ಯದ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ನೀಡಿರುವ ಯೋಜನೆಗಳನ್ನು ಮನೆಗೆ ಮನೆಗೆ ಹೋಗಿ ಪಕ್ಷದ ಸಾಧನೆಗಳನ್ನು ತಿಳಿಸಬೇಕು ಎಂದರು. ಮಹಿಳಾ ಮೋರ್ಚಾ ಸಮಾವೇಶಕ್ಕೆ ಮುಸ್ಲಿಮ್ ಸಮಾಜದ ಸಹೋದರಿಯರು ಬಂದದ್ದು ಅವರಿಗೆ ಶಾಸಕರು ಅಭಿನಂದನೆ ಸಲ್ಲಿಸಿದರು.