ಕಾರವಾರ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಂದು ಹೋದಲ್ಲೆಲ್ಲ ನಾವು ಗೆದ್ದಿದ್ದೇವೆ. ಹೀಗಾಗಿ ಅವರು ನಮ್ಮ ಜಿಲ್ಲೆಗೆ ಬರಲಿ ಅನ್ನೋದೇ ನಮ್ಮ ಹರಕೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಅವರದೇ ಆದ ವೇದಿಕೆಯಲ್ಲಿ ಭಾಷಣ ಮಾಡಿ ಎಲ್ಲರಿಗೂ ಬೈದು ಹೋಗುತ್ತಾರೆ. ಇದು ನಮ್ಮ ಗೆಲುವಿಗೆ ಸಹಕಾರಿಯಾಗಲಿದೆ ಎಂದು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ತರ ಕನ್ನಡ ಜಿಲ್ಲೆಗೆ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರಕ್ಕಾಗಿ ಆಗಮಿಸುತ್ತಿದ್ದರಿಂದ ಕಾರವಾರದಲ್ಲಿ ಅವರು ಈ ವಿಷಯವಾಗಿ ಪ್ರತಿಕ್ರಿಯಿಸಿದರು.
ಕಾರವಾರ ಶಾಸಕಿ ರೂಪಾಲಿ ನಾಯ್ಕಗೆ ಜೀವ ಬೆದರಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾವ ಬೆದರಿಕೆಗೂ ಬಗ್ಗಬೇಡಿ ಎನ್ನುವುದು ನಮ್ಮ ಅಭಿಪ್ರಾಯ, ಅವರು ಬಗ್ಗುವುದೂ ಇಲ್ಲ. ಒಬ್ಬ ಮಹಿಳೆಯಾಗಿ ಬಡವರ, ದುರ್ಬಲರ, ಧ್ವನಿ ಇಲ್ಲದೇ ಇದ್ದ ಜನರ ಪರವಾಗಿ ಅವರು ಕೆಲಸ ಮಾಡುತ್ತಿದ್ದಾರೆ. ಅವರ ರಾಜಕೀಯ ಚಟುವಟಿಕೆಗಳು, ಏಳಿಗೆಗಳನ್ನ ಕಂಡು ವಿರೋಧ ಪಕ್ಷದವರು ಟೀಕೆ ಮಾಡುತ್ತಾರೆ. ನಮಗೆ ಭರವಸೆ ಇದೆ, ಕಾರವಾರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ವಿರೋಧ ಪಕ್ಷಗಳ ಟೀಕೆ, ಟಿಪ್ಪಣಿಗಳಿಗೆ ನಾವು ಉತ್ತರ ಕೊಡುತ್ತೇವೆ. ಯಾವ ಬೆದರಿಕೆಗೂ ಜಗ್ಗುವ ಮಾತೇ ಇಲ್ಲ, ಸೂಕ್ತ ಭದ್ರತೆಯನ್ನ ಅವರಿಗೆ ಒದಗಿಸುತ್ತೇವೆ. ಮಹಿಳೆಯಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ, ಶಾಸಕಿಯಾಗಿ ರೂಪಾಲಿ ಯಶಸ್ವಿಯಾಗಿದ್ದಾರೆ. ಬೆದರಿಕೆ ಇರುವ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ಅಗತ್ಯ ಕ್ರಮ ಕೈಗೊಳ್ಳುತ್ತಾರೆ. ಯಾವುದೇ ತೊಂದರೆಯಾಗಲ್ಲ ಎಂದರು.