ಕಾರವಾರ: ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆಯನ್ನು ಪ್ರೀತಿ, ನಗುಮುಖದಿಂದ ನೀಡಿ ಎಂದು ಶಾಸಕಿ ರೂಪಾಲಿ ನಾಯ್ಕ ಅವರು ಹೇಳಿದರು.
ನಗರದ ಜಿಲ್ಲಾಸ್ಪತ್ರೆಯ ಆಚರಣದಲ್ಲಿ ನೂತನ 50 ಹಾಸಿಗೆಯ ತೀವ್ರ ನಿಗಾ ಘಟಕ ಕಟ್ಟಡ ನಿರ್ಮಾಣದ ಕಾಮಗಾರಿಯ ಅಡಿಗಲ್ಲು ಹಾಕಿ, ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನರಿಗೆ ಆಸ್ಪತ್ರೆ ಗೆ ಬಂದರೆ ಇನ್ನು ಸಿವಿಲ್ ಆಸ್ಪತ್ರೆ ಬದಲಾಗಿಲ್ಲ ಎನ್ನುವ ಅನುಭವ ಆಗಬಾರದು ಎಂದು ಅವರು ಹೇಳಿದರು. ಕಾರವಾರ ಗಡಿಭಾಗವಾದ್ದರಿಂದ ಇಲ್ಲಿನ ಜನರಿಗೆ ಅತೀ ಅವಶ್ಯಕತೆ ಇರುವ 50 ಹಾಸಿಗೆಯ ತೀವ್ರ ನಿಗಾ ಘಟಕವನ್ನು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿ ತಂದಿದ್ದೇನೆ.
ಅಂಕೋಲಾದ ಹಟ್ಟಿಕೇರಿಯಲ್ಲಿ ಆಗಬೇಕು ಎಂದು ಉದ್ದೇಶಿಸಿದ್ದ ತೀವ್ರ ನಿಗಾ ಘಟಕವನ್ನು ಜಿಲ್ಲಾಸ್ಪತ್ರೆಯ ಬಳಿಯೇ ಮಾಡಬೇಕು ಎಂದು ಸರಕಾರದ ಆದೇಶ ಇದ್ದರಿಂದ ಕಾರವಾರದ ಕಿಮ್ಸ್ ಆಸ್ಪತ್ರೆಯ ಬಳಿ ತೀವ್ರ ನಿಗಾ ಘಟಕ ನಿರ್ಮಾಣ ಮಾಡಲಾಗುತ್ತಿದೆ ಎಂದರು. ಇದರಿಂದ ಮುಂದಿನ ದಿನದಲ್ಲಿ ಅಪಘಾತ ಹಾಗೂ ತುರ್ತು ಸಂದರ್ಭದಲ್ಲಿ ತೀವ್ರ ನಿಗಾ ಘಟಕ ಹೆಚ್ಚು ಉಪಯೋಗವಾಗಲಿದೆ ಎಂದರು. ಕೋವಿಡ್ ಸಮಯದಲ್ಲೂ ಕೂಡ ನಮಗೆ ಎಲ್ಲಾ ರೀತಿಯ ಆರೋಗ್ಯ ಸೌಲಭ್ಯಗಳನ್ನು ನಮಗೆ ಒದಗಿಸಿದ್ದಾರೆ, ಆಕ್ಸಿಜನ್ ಸೇರಿದಂತೆ ಒಳ್ಳೆಯ ವೈದ್ಯಾಧಿಕಾರಿಗಳನ್ನು ಸರಕಾರ ನೀಡಿದೆ.
ಇಲ್ಲಿನ ವೈದ್ಯರು ಆಸ್ಪತ್ರೆಗೆ ಬಂದ ಬಡರೋಗಿಗಳಿಗೆ ನಗುಮುಖದಿಂದ ಮಾತನಾಡಿಸಿ, ಆ ಸಂದರ್ಭದಲ್ಲಿ ನೀವೆ ರೋಗಿಗಳಿಗೆ ಮತ್ತು ಅವರ ಕುಟುಂಬಕ್ಕೆ ದೇವರು ಆಗಿರುತ್ತೀರಿ. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿ ಅದರಿಂದ ಅವರು ಅರ್ಧ ಗುಣಮುಖರಾಗುತ್ತಾರೆ ಮತ್ತು ಆಸ್ಪತ್ರೆಯ ವ್ಯವಸ್ಥೆಯಲ್ಲಿ ಬದಲಾವಣೆ ತಂದುಕೊಳ್ಳಿ ನಾನು ಶಾಸಕಿ ಆದಾಗಿನಿಂದ ಆರೋಗ್ಯಕ್ಕೆ ಒತ್ತು ಕೊಟ್ಟು ಆಸ್ಪತ್ರೆ ಅಭಿವೃದ್ಧಿಗೆ ಶ್ರಮಿಸುತ್ತಾ ಬಂದಿದ್ದೇನೆ ಅದರ ಪ್ರತಿಫಲ ನಮ್ಮ ಬಡಜನರು ಪಡೆದುಕೊಳ್ಳುವಂತಾಗಬೇಕು ಎಂದರು.
ನಗರಸಭೆ ಅಧ್ಯಕ್ಷ ಡಾ. ನಿತಿನ್ ಪಿಕಳೆ ಅವರು ಮಾತನಾಡಿ ತೀವ್ರ ನಿಗಾ ಘಟಕ ಆಗುತ್ತಿರುವುದು ಹರ್ಷದ ಸಂಗತಿ. ಇದು ಜನರ ಬಹುದಿನದ ಬೇಡಿಕೆಯಾಗಿತ್ತು. ಘಟಕ ಯಶಸ್ವಿಯಾಗಲು ಜನರು. ವೈದ್ಯರಿಗೆ ಸಹಕಾರ ನೀಡಬೇಕು ಎಂದರು. ನಗರಸಭೆ ಉಪಾಧ್ಯಕ್ಷ ಪಿ. ಪಿ. ನಾಯ್ಕ, ವಾರ್ಡ್ ಸದಸ್ಯೆ ರೇಷ್ಮಾ ಮಾಳ್ಸೇಕರ್, ಕಿಮ್ಸ್ ನಿರ್ದೇಶಕ ಡಾ. ಗಜಾನನ ನಾಯಕ, ವೈದ್ಯ ವರ್ಗದವರು ಇದ್ದರು.