ಕಾರವಾರ: ರಿಯರ್ ಅಡ್ಮಿರಲ್ ಕೆಎಂ ರಾಮಕೃಷ್ಣನ್ ಅವರು ಕರ್ನಾಟಕ ನೌಕಾ ಪ್ರದೇಶದ ನೂತನ ಕಮಾಂಡಿಂಗ್ ಫ್ಲಾಗ್ ಆಫೀಸರ್ ಆಗಿ ನೇಮಕಗೊಂಡಿದ್ದು ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ಕಾರವಾರದ ಅರ್ಗಾದ ನೌಕಾನೆಲೆಯಲ್ಲಿನ ಘಟಕಗಳು ಸೇರಿದಂತೆ ಕರ್ನಾಟಕದ ಎಲ್ಲಾ ಸಂಸ್ಥೆಗಳು, ಘಟಕಗಳ ಕಾರ್ಯಾಚರಣೆಗಳು ಮತ್ತು ಆಡಳಿತದ ಜವಾಬ್ದಾರಿಯನ್ನು ಕರ್ನಾಟಕ ನೌಕಾ ಪ್ರದೇಶದ ಕಮಾಂಡಿಂಗ್ ಫ್ಲಾಗ್ ಆಫೀಸರ್ ಹೊಂದಿರುತ್ತಾರೆ.
ರಿಯರ್ ಅಡ್ಮಿರಲ್ ಕೆಎಮ್ ರಾಮಕೃಷ್ಣನ್, ಅವರನ್ನು 1991ರ ಜನವರಿಗೆ 01 ರಂದು ಭಾರತೀಯ ನೌಕಾಪಡೆಯ ಕಾರ್ಯನಿರ್ವಹಣಾ ಶಾಖೆಯಲ್ಲಿ ನಿಯುಕ್ತಿಗೊಳ್ಳುವ ಮೂಲಕ ಸೇವೆಗೆ ಸೇರಿದರು.
ರಾಮಕೃಷ್ಣನ್ ಅವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಖಡಕ್ವಾಸ್ಲಾ, ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜು, ವೆಲ್ಲಿಂಗ್ಟನ್ ಮತ್ತು ಆರ್ಮಿ ವಾರ್ ಕಾಲೇಜು (ಮಧ್ಯಪ್ರದೇಶ)ನ ಹಳೆಯ ವಿದ್ಯಾರ್ಥಿಯಾಗಿದ್ದು, ಡಿಫೆನ್ಸ್ ಮ್ಯಾನೇಜ್ಮೆಂಟ್, ಮತ್ತು ಡಿಫೆನ್ಸ್ ಸ್ಟಡಿ ವಿಷಯದಲ್ಲಿ ಅವರು ಎಮ್ಫಿಲ್ ಪದವಿ ಪಡೆದಿದ್ದಾರೆ.
ರಕ್ಷಣಾ ಅಧ್ಯಯನ ವಿಷಯದಲ್ಲಿ ಎಮ್ಎಸ್ಸಿ ಮತ್ತು ಎಚ್ಆರ್ಎಮ್ನಲ್ಲಿ ಮಾಸ್ಟರ್ಸ್ ಪದವಿ ಪಡೆದಿದ್ದಾರೆ. ವಿಶಿಷ್ಟ ಸೇವಾ ಪದಕವನ್ನು ಪಡೆದಿರುವ ಅಡ್ಮಿರಲ್ ಅವರು ಅಪಾರ ಕಾರ್ಯಾಚರಣೆಯ ಅನುಭವ ಹೊಂದಿದ್ದಾರೆ ಕ್ಷಿಪಣಿ ನೌಕೆ ಐಎನ್ಎಸ್ ನಿರ್ಭಿಕ್, ಆಫ್ ಶೋರ್ ಪೆಟ್ರೋಲ್ ನೌಕೆ ಸುಭದ್ರ ಮತ್ತು ಫ್ರಿಗೇಟ್ ಐಎನ್ಎಸ್ ಬೆಟ್ವಾ ನೌಕೆಯನ್ನು ಮುನ್ನಡೆಸಿದ್ದಾರೆ.
ಅವರು ಐಎನ್ಎಸ್ ಶಾರದಾ, ಕುತಾರ್, ರಾಣಾ, ಕೃಷ್ಣ ಮತ್ತು ತಲ್ವಾರ್ ಯುದ್ಧ ನೌಕೆಗಳಲ್ಲಿ ನ್ಯಾವಿಗೇಟಿಂಗ್ ಅಧಿಕಾರಿಯಾಗಿ ಅವರು ಸೇವೆ ಸಲ್ಲಿಸಿದ್ದಾರೆ. ಫ್ಲಾಗ್ ಆಫೀಸರ್ ಆಗಿ, ಅವರು ತಮ್ಮ ಪ್ರಸ್ತುತ ಹುದ್ದೆಗೆ ನಿಯೋಜನೆಯನ್ನು ಗೊಳ್ಳುವ ಮೊದಲು ಅಸಿಸ್ಟಂಟ್ ಚೀಫ್ ನೆವಲ್ ಆಫೀಸರ್ ಆಗಿ (ಸಂವಹನ, ಬಾಹ್ಯಾಕಾಶ, ನೆಟ್ವರ್ಕ್ ಸೆಂಟ್ರಿಕ್ ಕಾರ್ಯಾಚರಣೆಗಳು) ಸೇವೆ ಸಲ್ಲಿಸಿದ್ದಾರೆ.